ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು

KannadaprabhaNewsNetwork |  
Published : Sep 01, 2026, 02:30 AM IST
ಸವಣೂರ ಪಟ್ಟಣದ ಪುರಸಭೆ ಆವರಣದ ಮುಂಭಾಗದಲ್ಲಿ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸಚಿವರು ನೀಡಿದ ಭರವಸೆಯಿಂದಾಗಿ ಕೈಬಿಡಲಾಯಿತು. | Kannada Prabha

ಸಾರಾಂಶ

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ನಡೆಸುತ್ತಿದ್ದ ಎಂಟು ದಿನಗಳ ಅಹೋರಾತ್ರಿ ಧರಣಿ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರು ಭೇಟಿ ನೀಡಿ ಲಿಖಿತ ಭರವಸೆಯನ್ನು ನೀಡಿದ ಬಳಿಕ ಸೋಮವಾರ ಅನಿರ್ದಿಷ್ಟ ಅಹೋರಾತ್ರಿ ಧರಣಿಯನ್ನು ಅಂತ್ಯಗೊಳ್ಳಿಸಲಾಯಿತು.

ಸವಣೂರು: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ನಡೆಸುತ್ತಿದ್ದ ಎಂಟು ದಿನಗಳ ಅಹೋರಾತ್ರಿ ಧರಣಿ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರು ಭೇಟಿ ನೀಡಿ ಲಿಖಿತ ಭರವಸೆಯನ್ನು ನೀಡಿದ ಬಳಿಕ ಸೋಮವಾರ ಅನಿರ್ದಿಷ್ಟ ಅಹೋರಾತ್ರಿ ಧರಣಿಯನ್ನು ಅಂತ್ಯಗೊಳ್ಳಿಸಲಾಯಿತು.

ಪುರಸಭೆ ಆವರಣದ ಮುಂಭಾಗದಲ್ಲಿ ಬಿಸಿಲು-ಮಳೆ ಲೆಕ್ಕಿಸದೆ ನಡೆದಿದ್ದ ಈ ಪ್ರತಿಭಟನೆ, ಆರಂಭದಲ್ಲಿ ಆರು ದಿನಗಳ ಹೋರಾಟ ಎಂದು ವರದಿಯಾಗಿದ್ದರೂ ವಾಸ್ತವವಾಗಿ ಎಂಟನೇ ದಿನಕ್ಕೆ ಕಾಲಿಟ್ಟಿತ್ತು. ಸ್ವಂತ ಹಣ, ಬ್ಯಾಂಕ್ ಸಾಲ ಹಾಗೂ ಆಸ್ತಿ ಅಡವಿಟ್ಟು ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದ ಗುತ್ತಿಗೆದಾರರು, ಬಾಕಿ ಹಣಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕಡತದ ನೆಪ ಹೇಳಿ ಮುಂದೂಡಲಾಗುತ್ತಿತ್ತು ಎಂದು ಆರೋಪಿಸಿ, ಮುಖ್ಯಾಧಿಕಾರಿಗಳಿಗೆ ಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆ ತೀವ್ರಗೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಸ್ಥಳೀಯ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣರೊಂದಿಗೆ ಪುರಸಭೆ ಆವರಣಕ್ಕೆ ಆಗಮಿಸಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು. ಸ್ಥಳದಲ್ಲೇ ಸ್ಥಳೀಯ ಸಂಸದರಿಗೆ ದೂರವಾಣಿ ಕರೆ ಮಾಡಿದ ಸಚಿವ ಲಮಾಣಿ, 15ನೇ ಹಣಕಾಸು ಯೋಜನೆಯ ಬಾಕಿ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಶೀಘ್ರ ಇತ್ಯರ್ಥಪಡಿಸುವ ಭರವಸೆ ನೀಡಿದರು. ಶಾಸಕ ಪಠಾಣ ಅವರು, ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದಲ್ಲಿ ರಾಜ್ಯ ಸರ್ಕಾರದ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಇಬ್ಬರು ಜನಪ್ರತಿನಿಧಿಗಳ ಜಂಟಿ ಲಿಖಿತ ಭರವಸೆಯ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಧರಣಿಯನ್ನು ಸದ್ಯಕ್ಕೆ ಹಿಂಪಡೆದಿದ್ದಾರೆ. ಆದರೆ ನಿಗದಿತ ಕಾಲಮಿತಿಯೊಳಗೆ ಬಾಕಿ ಹಣ ಬಿಡುಗಡೆಯಾಗದಿದ್ದರೆ ಮತ್ತೆ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲಕ್ಷ್ಮಣ್ ಕನವಳ್ಳಿ, ಶಿವಾನಂದ ಹುಲ್ಲಮ್ಮನವರ, ಪ್ರವೀಣ್ ಬಾಲೆ ಹೊಸೂರು, ವಿನಾಯಕ ಭೋವಿ, ರಾಜೇಶ್ ವಡ್ಡರ, ವಿನಾಯಕ್ ಇಳಿಗೆರೆ, ಮಂಜುನಾಥ್ ಕೈರಣ್ಣವರ್, ಗೌಸ್‌ಪಿರಜಾದೆ, ಶಫಿ ಬಾಡ, ರಾಘವೇಂದ್ರ ಬಾಲ್ಯಹೊಸೂರು, ರಾಜೇಶ್ ವಡ್ಡರ, ಬಸವರಾಜ ಕರ್ನೂಲ, ಶಂಕ್ರಪ್ಪ ಮರಗಪ್ಪನವರ, ಗುತ್ಯಪ್ಪ ಹರಿಜನ, ರಾಜು ಮಾದರ, ಮಾಲ್ತೇಶ್ ಬ್ಯಾಡಗಿ, ಶೇಖಪ್ಪ ದಂಡಿನ, ಸುರೇಶ ಮೂಡನವರ, ಮಂಜುನಾಥ ಹರಿಜನ, ದ್ಯಾಮಣ್ಣ ಹರಿಜನ, ಮಾಲ್ತೇಶ ಚೌಡನ್ನವರ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ
ಕನ್ನಡಪ್ರಭ ಕಳಕಳಿಗೆ ಸ್ಪಂದಿಸಿದ ಬಳ್ಳಾರಿ ನಾರಾ ಕುಟುಂಬ