ಬಳ್ಳಾರಿ: ಹಿಂದೂ ಧರ್ಮದಲ್ಲಿ ಹುಟ್ಟಿದ ಸಚಿವರೊಬ್ಬರು ‘ಇಸ್ಲಾಂ ಧರ್ಮವೇ ಎಲ್ಲದಕ್ಕಿಂತ ಶ್ರೇಷ್ಠ ಧರ್ಮ’ ಎಂದು ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ ಹಾಗೂ ಅಖಂಡ ಹಿಂದೂ ಸಮಾಜಕ್ಕಾದ ಮುಜುಗರ ಸಂಗತಿ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.
ಸನಾತನ ಧರ್ಮದಲ್ಲಿ ಹುಟ್ಟಿದ ಸಚಿವರೊಬ್ಬರು ‘ಇಸ್ಲಾಂ ಧರ್ಮವೇ ಎಲ್ಲದಕ್ಕಿಂತ ಶ್ರೇಷ್ಠ ಧರ್ಮ’ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಮನಸ್ಥಿತಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ನಾವೆಲ್ಲರೂ ಒಗ್ಗೂಡಿ ನಮ್ಮ ಸನಾತನ ಧರ್ಮವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದರು.
ಹನುಮ ಮಾಲೆ ಧರಿಸಿ ಈಗ 11 ವರ್ಷಗಳು ಪೂರ್ಣಗೊಳ್ಳುತ್ತಿವೆ. ಹನುಮಂತ ಎಂದರೆ ಮಹಾ ಬಲವಂತ ಹಾಗೂ ಅಪಾರ ಭಕ್ತಿವಂತ. ಶ್ರೀರಾಮನಿಗಿಂತಲೂ ರಾಮನಾಮ ಹೆಚ್ಚು ಶಕ್ತಿಶಾಲಿ ಎಂಬುದನ್ನು ಹನುಮಂತ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ ಎಂದರು.ಲಂಕೆಗೆ ಸೇತುವೆ ಕಟ್ಟುವಾಗ ಶ್ರೀರಾಮದೇವರು ಹಾಕಿದ ಕಲ್ಲು ನೀರಿನಲ್ಲಿ ಮುಳುಗಿ ಹೋಯಿತು. ಆದರೆ, ‘ಶ್ರೀರಾಮ’ ಎಂದು ಬರೆದು ಹನುಮಂತ ಮತ್ತು ಭಕ್ತರು ಹಾಕಿದ ಕಲ್ಲುಗಳು ನೀರಿನಲ್ಲಿ ತೇಲಿದವು. ಹೀಗಾಗಿ ನಾವು ರಾಮ ಮತ್ತು ಹನುಮ ದೇವರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಎಂಎಲ್‌ಸಿ ವೈ.ಎಂ. ಸತೀಶ್, ಶಾಸಕ ಗಾಲಿ ಜನಾರ್ದನ ರೆಡ್ಡಿ, ಕಲ್ಯಾಣ ಸ್ವಾಮೀಜಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಪಾಲಿಕೆ ವಿರೋಧ ಪಕ್ಷ ದ ನಾಯಕ ಶ್ರೀನಿವಾಸ್ ಮೊತ್ಕರ್ ಮುಖಂಡರಾದ ಅರುಣಾ ಲಕ್ಷ್ಮಿ, ಮಾರುತಿ ಪ್ರಸಾದ್, ವೆಂಕಟರಾಮಣ, ಮಹಿಪಾಲ್, ಅಶೋಕ್ ಕುಮಾರ್, ಪ್ರಸನ್ನ, ಗೋಪಾಲ ಕೃಷ್ಣ, ಬಿ.ಕೆ.ಸುಂದರ್ ಸೇರಿದಂತೆ ಇತರರಿದ್ದರು.