ರಾಮನಗರ: ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳ ಅನುಷ್ಠಾನದಲ್ಲಿ ಡಿಸೆಂಬರ್ ನೊಳಗೆ ಪ್ರಗತಿ ಕಂಡು ಬರದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸುವ ಜೊತೆಗೆ ಅವರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವ ರಾಮಲಿಂಗಾರೆಡ್ಡಿರವರು ಜೆಜೆಎಂ ಯೋಜನೆಗೆ ಎದುರಾಗಿರುವ ತೊಡಕುಗಳನ್ನು ನಿವಾರಿಸಿ, ಕಾಮಗಾರಿಗೆ ಚಾಲನೆ ನೀಡಬೇಕು. ಕಾಮಗಾರಿಯಲ್ಲಿ ಏನಾದರು ಪ್ರಗತಿ ಕಂಡು ಬರುತ್ತದೆಯೇ ಎಂಬುದನ್ನು ವರ್ಷದ ಕೊನೆವರೆಗೆ ಕಾದು ನೋಡುತ್ತೇವೆ ಎಂದು ಗಡುವು ನೀಡಿದರು.ಜಿಲ್ಲೆಯ ಕನಕಪುರ, ಹಾರೋಹಳ್ಳಿ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ತೊಡಕುಗಳು ಕಂಡು ಬರುತ್ತಿಲ್ಲ. ಆದರೆ, ರಾಮನಗರ ಮತ್ತು ಮಾಗಡಿ ತಾಲೂಕಿನಲ್ಲಿ ಮಾತ್ರ ಹೆಚ್ಚಿನ ಸಮಸ್ಯೆಗಳು ಎದುರಾಗಿವೆ. ಇದನ್ನು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ತಾಪಂ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಗಳು ನಿರ್ವಹಣೆ ಮಾಡುವಂತೆ ಸೂಚಿಸಿದರು.
ಕಾಮಗಾರಿ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ವೀರನಂಜೇಗೌಡ, ಜಿಲ್ಲೆಯಲ್ಲಿ 1528 ಕಾಮಗಾರಿಗಳ ಪೈಕಿ 887 ಕಾಮಗಾರಿಗಳು ಮುಗಿದಿದ್ದು, 562 ಕಾಮಗಾರಿಗಳು ಪ್ರಗತಿಯಲ್ಲಿದೆ. 38 ಕಾಮಗಾರಿ ಪ್ರಾರಂಭವಾಗಿಲ್ಲ, 22 ಕಾಮಗಾರಿಗಳನ್ನು ಕೈ ಬಿಡಲಾಗಿದ್ದು, 19 ಕಾಮಗಾರಿಗಳಿಗೆ ಮರು ಟೆಂಡರ್ ಕರೆಯಲಾಗಿದೆ. 293.20 ಕೋಟಿ ರುಪಾಯಿ ವೆಚ್ಚವಾಗಿದೆ ಎಂದು ಹೇಳಿದರು.ಚನ್ನಪಟ್ಟಣ ತಾಲೂಕಿನಲ್ಲಿ 227 ಕಾಮಗಾರಿಗಳ ಪೈಕಿ 147 ಕಾಮಗಾರಿಗಳು ಪೂರ್ಣಗೊಂಡಿದ್ದು, 77 ಕಾಮಗಾರಿ ಪ್ರಗತಿಯಲ್ಲಿದೆ. 1 ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದ್ದು, 2 ಕಾಮಗಾರಿ ಕೈಬಿಡಲಾಗಿದೆ. ಇಲ್ಲಿವರೆಗೆ 65.48 ಕೋಟಿ ರುಪಾಯಿ ಖರ್ಚಾಗಿದೆ. ಕನಕಪುರ ತಾಲೂಕಿನಲ್ಲಿ 603 ಕಾಮಗಾರಿಗಳಲ್ಲಿ 355 ಕಾಮಗಾರಿ ಮುಗಿದಿದ್ದು, 229 ಕಾಮಗಾರಿ ಪ್ರಗತಿಯಲ್ಲಿದೆ. 7 ಕಾಮಗಾರಿ ಪ್ರಾರಂಭವಾಗಿಲ್ಲ, 11 ಕಾಮಗಾರಿ ಕೈಬಿಡಲಾಗಿದೆ. ಇಲ್ಲಿವರೆಗೆ 76.95 ಕೋಟಿ ಖರ್ಚಾಗಿದೆ ಎಂದು ತಿಳಿಸಿದರು.
ಮಾಗಡಿ ತಾಲೂಕಿನಲ್ಲಿ 393 ಕಾಮಗಾರಿಗಳ ಪೈಕಿ 180 ಕಾಮಗಾರಿ ಮುಕ್ತಾಯಗೊಂಡಿದ್ದು, 13 ಕಾಮಗಾರಿ ಪ್ರಾರಂಭವಾಗಿಲ್ಲ. 12 ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದ್ದು, 2 ಕಾಮಗಾರಿ ಕೈಬಿಡಲಾಗಿದೆ. ಇಲ್ಲಿವರೆಗೆ 87.44 ಕೋಟಿ ವೆಚ್ಚವಾಗಿದೆ. ರಾಮನಗರ ತಾಲೂಕಿನಲ್ಲಿ 305 ಕಾಮಗಾರಿಗಳಲ್ಲಿ 205 ಕಾಮಗಾರಿ ಮುಗಿದಿದ್ದು, 70 ಕಾಮಗಾರಿ ಪ್ರಗತಿಯಲ್ಲಿದೆ. 18 ಕಾಮಗಾರಿ ಪ್ರಾರಂಭವಾಗದಿದ್ದರೆ 5 ಕಾಮಗಾರಿ ಮರು ಟೆಂಡರ್ , 7 ಕಾಮಗಾರಿ ಕೈಬಿಡಲಾಗಿದೆ. ಇದಕ್ಕಾಗಿ 63.33 ಕೋಟಿ ಖರ್ಚಾಗಿದೆ ಎಂದು ವೀರನಂಜೇಗೌಡ ವಿವರ ನೀಡಿದರು.ಕಾಮಗಾರಿ ವಿಳಂಬವಾಗಲು ಕಾರಣವೇನು?
ಆಗ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜುರವರು ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರುಗಳು ಬರುತ್ತಿವೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ. ಎಲ್ಲೆಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದೆ. ಕಾಮಗಾರಿ ವಿಳಂಬವಾಗಲು ಕಾರಣವೇನು ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಆಯಾಯ ತಾಲೂಕುಗಳ ಎಂಜಿನಿಯರ್ ಗಳು, ಚನ್ನಪಟ್ಟಣ ತಾಲೂಕಿನಲ್ಲಿ 117 ರ ಪೈಕಿ 78 ಓವರ್ ಹೆಡ್ ಟ್ಯಾಂಕ್ ಪೂರ್ಣಗೊಂಡಿದ್ದು, 12 ಪ್ರಗತಿಯಲ್ಲಿದೆ. 9 ಟ್ಯಾಂಕ್ ಗಳಿಗೆ ಜಾಗದ ಸಮಸ್ಯೆ ಎದುರಾಗಿದೆ. ಕನಕಪುರ ತಾಲೂಕಿನಲ್ಲಿ 337ರ ಪೈಕಿ 138 ಟ್ಯಾಂಕ್ ಗಳು ಪೂರ್ಣಗೊಂಡಿದ್ದು, 28 ಟ್ಯಾಂಕ್ ಗಳ ಕಾಮಗಾರಿ ಪ್ರಗತಿಯಲ್ಲಿದೆ. 27 ಟ್ಯಾಂಕ್ ಗಳಿಗೆ ಜಾಗದ ಸಮಸ್ಯೆ ಇದ್ದು, 17 ಟ್ಯಾಂಕ್ ಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದರು.
ಮಾಗಡಿ ತಾಲೂಕಿನಲ್ಲಿ 296 ಪೈಕಿ 118 ಟ್ಯಾಂಕ್ ಗಳು ಮುಗಿದಿದ್ದು, 63 ಟ್ಯಾಂಕ್ ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 32 ಟ್ಯಾಂಕ್ ಗಳಿಗೆ ಜಾಗದ ಸಮಸ್ಯೆಗಳಿದೆ. ರಾಮನಗರ ತಾಲೂಕಿನಲ್ಲಿ 201 ಟ್ಯಾಂಕ್ ಗಳ ಪೈಕಿ 126 ಟ್ಯಾಂಕ್ ಗಳ ಕಾಮಗಾರಿ ಪೂರ್ಣಗೊಂಡಿದ್ದು, 29 ಟ್ಯಾಂಕ್ ಗಳ ಕಾಮಗಾರಿ ಪ್ರಗತಿಯಲ್ಲಿದೆ. 15 ಟ್ಯಾಂಕ್ ಗಳಿಗೆ ಜಾಗದ ಸಮಸ್ಯೆ ತಲೆದೂರಿದೆ ಎಂದು ಎಂಜಿನಿಯರ್ ಗಳು ತಿಳಿಸಿದರು.ಸಚಿವ ರಾಮಲಿಂಗಾರೆಡ್ಡಿ ಎಲ್ಲೆಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದಿಯೊ ಅದನ್ನು 15 ದಿನದೊಳಗೆ ಬಗೆಹರಿಸಿ. ಈ ವಿಚಾರಗಳನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಸಹಕಾರದಿಂದ ಪರ್ಯಾಯ ಜಾಗ ಗುರುತಿಸುವಂತೆ ಎಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್ , ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.21ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.