ವಿದ್ಯುತ್‌ ಸುರಕ್ಷತೆ ಎತ್ತಿ ಹಿಡಿಯಲು ಗುತ್ತಿಗೆದಾರರ ಒತ್ತಾಯ

KannadaprabhaNewsNetwork |  
Published : Sep 04, 2026, 01:30 AM IST
3ಕೆಡಿವಿಜಿ7-ದಾವಣಗೆರೆಯಲ್ಲಿ ಗುರುವಾರ ರಾಜ್ಯ ಅನುಮತಿ ಪಡೆದ ಎಸ್‌ಸಿ-ಎಸ್‌ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಲಕ್ಷ್ಮಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಗಳಲ್ಲಿ ವಿದ್ಯುತ್ ಸುರಕ್ಷತೆ, ತಾಂತ್ರಿಕ ಜವಾಬ್ಧಾರಿ ಹಾಗೂ ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ರಾಜ್ಯ ಅನುಮತಿ ಪಡೆದ ಎಸ್‌ಸಿ-ಎಸ್‌ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಲಕ್ಷ್ಮಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ತಾಂತ್ರಿಕ ಜವಾಬ್ದಾರಿ ಗ್ರಾಹಕರ ಸ್ವಘೋಷಣೆ ಮೇಲೆ ವಹಿಸೋದು ಸೂಕ್ತವಲ್ಲ: ಲಕ್ಷ್ಮಣ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಗಳಲ್ಲಿ ವಿದ್ಯುತ್ ಸುರಕ್ಷತೆ, ತಾಂತ್ರಿಕ ಜವಾಬ್ಧಾರಿ ಹಾಗೂ ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ರಾಜ್ಯ ಅನುಮತಿ ಪಡೆದ ಎಸ್‌ಸಿ-ಎಸ್‌ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಲಕ್ಷ್ಮಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸಂಪರ್ಕ ಪ್ರಕ್ರಿಯೆ ಸರಳೀಕರಣದ ಹೆಸರಿನಲ್ಲಿ ಸುರಕ್ಷತಾ ಮಾನದಂಡ ಸಡಿಲಗೊಳಸಬಾರದು. ಸಂಪೂರ್ಣ ತಾಂತ್ರಿಕ ಜವಾಬ್ದಾರಿಯನ್ನು ಗ್ರಾಹಕರ ಸ್ವಂಯ ಘೋಷಣೆ ಮೇಲೆ ವಹಿಸುವುದು ಸೂಕ್ತವಲ್ಲ ಎಂದರು.

ವೈರಿಂಗ್‌ ನಕ್ಷೆ, ಪರೀಕ್ಷಾ ವರದಿ ಮತ್ತು ಪೂರ್ಣಗೊಳಿಸುವಿಕೆ ದಾಖಲೆಗಳನ್ನು ಕೇವಲ ಆಡಳಿತಾತ್ಮಕ ಹೊರೆ ಎಂಬುದಾಗಿ ಪರಿಗಣಿಸದೇ, ವಿದ್ಯುತ್ ಸುರಕ್ಷತಾ ತಪಾಸಣೆಗಾಗಿ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಬಹುಮಹಡಿ ಕಟ್ಟಡದ ಮಿತಿಯನ್ನು 35 ಕಿಲೋ ವ್ಯಾಟ್‌ನಿಂದ 150 ಕಿಲೋವ್ಯಾಟ್‌ಗೆ ಹೆಚ್ಚಿಸುವ ಪ್ರಸ್ತಾಪವನ್ನು ಸ್ವತಂತ್ರ ತಾಂತ್ರಿಕ ಸುರಕ್ಷತಾ ಅಧ್ಯಯನ ಇಲ್ಲದೆ ಜಾರಿಗೆ ತರಬಾರದು ಎಂದು ಹೇಳಿದರು.

ನಿರ್ಮಿತ ಪ್ರದೇಶದ ಮಾನದಂಡ ತೆಗೆದುಹಾಕುವ ಮುನ್ನ ಕಟ್ಟಡದ ಎತ್ತರ, ವಸತಿ ಯೂನಿಟ್, ಅಗ್ನಿ ಸುರಕ್ಷತೆ, ಟ್ರಾನ್ಸಫಾರ್ಮರ್‌ ಸಾಮರ್ಥ್ಯ ಮತ್ತು ಗರಿಷ್ಠ ವಿದ್ಯುತ್ ಬೇಡಿಕೆ ಮುಂತಾದ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಸ್ವಯಂ ನಿರ್ವಹಣೆ ಆಯ್ಕೆಯನ್ನು ಸಂಪೂರ್ಣವಾಗಿ ರದ್ಧುಗೊಳಿಸದೇ, ಪರವಾನಿಗೆ ಪಡೆದ ಗುತ್ತಿಗೆದಾರರು ಮತ್ತು ವಿದ್ಯುತ್ ಸರಬರಾಜು ಕಂಪನಿಯ ಮೇಲ್ವಿಚಾರಣೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಹೊಸ ನಿಯಮಗಳಿಂದ ಸಣ್ಣ ಮತ್ತು ಮಧ್ಯಮ ಉದ್ಯಮ, ವಾಣಿಜ್ಯ ಸಂಸ್ಥೆ, ಅಪಾರ್ಟ್‌ಮೆಂಟ್ ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಬೀರುವ ಆರ್ಥಿಕ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಪ್ರಕಟಿಸಬೇಕು. ಸ್ಥಳೀಯ ತಪಾಸಣೆ ಮತ್ತು ಶಾಸನಬದ್ಧ ತಪಾಸಣೆ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ನಿಯಮಗಳನ್ನು ಕೈ ಬಿಡಬೇಕು. ಸ್ವಯಂಘೋಷಣೆ ವ್ಯವಸ್ಥೆಯಿದ್ದರೂ ಅದನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರದ ಸುರಕ್ಷತಾ ನಿಯಮ, ತಾಂತ್ರಿಕ ಪರೀಕ್ಷೆ ಮತ್ತು ವೃತ್ತಿಪರ ಹೊಣೆಗಾರಿಕೆಗೆ ಒಳಪಡಿಸಬೇಕು ಎಂದು ಲಕ್ಷ್ಮಣ ಮನವಿ ಮಾಡಿದರು.

ಸಂಘದ ಮುಖಂಡರಾದ ಬಿ.ಎಸ್.ನಾಗರಾಜ, ರಮೇಶ ನಾಯ್ಕ ಇತರರು ಇದ್ದರು.

- - -

-3ಕೆಡಿವಿಜಿ7: ದಾವಣಗೆರೆಯಲ್ಲಿ ಗುರುವಾರ ರಾಜ್ಯ ಅನುಮತಿ ಪಡೆದ ಎಸ್‌ಸಿ-ಎಸ್‌ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಲಕ್ಷ್ಮಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗಡಿ ಬಾಗಿಲಿಗೆ ಬೀದಿದೀಪದ ಕಂಬಗಳು!
ಹಾಸ್ಟೆಲ್‌ನಲ್ಲಿ ಪಿಯು ವಿದ್ಯಾರ್ಥಿನಿ ರಂಜಿತಾ ನೇಣಿಗೆ ಶರಣು