ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಟೀಂ ಅಕಾಡೆಮಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪತ್ತೆಯಾದ ಘಟನೆ ನಗರದಲ್ಲಿ ಗುರುವಾರ ವರದಿಯಾಗಿದೆ. ಮೂಲತಃ ವಿಜಯನಗರ ಜಿಲ್ಲೆಯ ಕುರುವತ್ತಿ ಗ್ರಾಮದ ನಿಂಗಪ್ಪ ಹಾಗೂ ರೂಪಾ ದಂಪತಿಯ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ.

- ಮಗಳ ಸಾವಿಗೆ ಕಾಲೇಜಿನವರೇ ಕಾರಣವೆಂದ ಪಾಲಕರ ಆರೋಪ- ತನಿಖೆಯಾಗಲಿ, ಸತ್ಯ ಏನೆಂದು ಗೊತ್ತಾಗುತ್ತದೆ: ಆಡಳಿತ ಮಂಡಳಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಟೀಂ ಅಕಾಡೆಮಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪತ್ತೆಯಾದ ಘಟನೆ ನಗರದಲ್ಲಿ ಗುರುವಾರ ವರದಿಯಾಗಿದೆ. ಮೂಲತಃ ವಿಜಯನಗರ ಜಿಲ್ಲೆಯ ಕುರುವತ್ತಿ ಗ್ರಾಮದ ನಿಂಗಪ್ಪ ಹಾಗೂ ರೂಪಾ ದಂಪತಿಯ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ.

ಇಲ್ಲಿನ ಟೀಂ ಅಕಾಡೆಮಿ ಕಾಲೇಜಿನ ಹಾಸ್ಟೆಲ್‌ಗೆ ವಿದ್ಯಾರ್ಥಿನಿ ರಂಜಿತಾ ಬುಧವಾರ ಸಂಜೆ 5.30ಕ್ಕೆ ಹೋಗಿದ್ದಳು. ರಾತ್ರಿ 8.30ರ ವೇಳೆ ರಂಜಿತಾ ಸಹಪಾಠಿಗಳು ರೂಂಗೆ ಹೋದಾಗ ಬಾಗಿಲು ತೆರೆಯಲಿಲ್ಲ. ಆಗ ವಾರ್ಡನ್‌ ಗಮನಕ್ಕೆ ತಂದ ನಂತರ ಆಡಳಿತ ಮಂಡಳಿಗೆ ವಿಷಯ ತಿಳಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ.

ನಾಲ್ಕು ದಿನದ ಹಿಂದೆ ರಂಜಿತಾ ತಮ್ಮ ಊರಿಗೆ ಹೋಗಿ, ಹಾಸ್ಟೆಲ್‌ಗೆ ಮರಳಿದ್ದಳು. ಬುಧವಾರ ರಾತ್ರಿ ಸಹಪಾಠಿಗಳು ಬಂದು ಬಾಗಿಲು ಬಡಿದರೂ ರೂಂ ಬಾಗಿಲು ತೆರೆಯದಿದ್ದರಿಂದ ವಾರ್ಡನ್‌ಗೆ ವಿಷಯ ಮುಟ್ಟಿಸಲಾಗಿದೆ. ವಾರ್ಡನ್‌ ಆಡಳಿತ ಮಂಡಳಿಗೆ ತಿಳಿಸಿ, ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿನಿಯ ನಿಂಗಪ್ಪನವರಿಗೂ ವಿಷಯ ಮುಟ್ಟಿಸಿದಾಗ ದಾವಣಗೆರೆಯಲ್ಲಿದ್ದ ತಮ್ಮ ಸಂಬಂಧಿಯನ್ನು ಹಾಸ್ಟೆಲ್‌ಗೆ ಕಳಿಸಿದ್ದರು.

ಸ್ಥಳಕ್ಕೆ ಧಾವಿಸಿದ ಸಂಬಂಧಿಗಳ ಸಮ್ಮುಖದಲ್ಲಿ ಕೊಠಡಿ ಬಾಗಿಲು ಒಡೆದು ನೋಡಿದಾಗ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ರಂಜಿತಾ ಶವ ಪತ್ತೆಯಾಗಿದೆ. ವಿಷಯ ತಿಳಿದ ತಂದೆ ನಿಂಗಪ್ಪ, ಕುಟುಂಬಸ್ಥರು ಕಣ್ಣೀರು ಹಾಕಿದರು. ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ನಿಂಗಪ್ಪ, ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಮೂರು ಅಡಿ ಕಿಟಕಿಗೆ ವೇಲ್‌ನಲ್ಲಿ ನೇಣು ಹಾಕಿಕೊಳ್ಳಲು ಹೇಗೆ ಸಾಧ್ಯ ಎಂದು ಕಣ್ಣೀರಿಟ್ಟರು.

ತಮ್ಮ ಮಗಳಿಗೆ ಕಾಲೇಜಿನವರೇ ಏನೋ ಮಾಡಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕು. ಕಾಲಿಗೆ ಒಂದು ಮುಳ್ಳು ಚುಚ್ಚಿದರೂ ನನ್ನ ಬಳಿ ಮಗಳು ಹೇಳುತ್ತಿದ್ದಳು. ಹಾಸ್ಟೆಲ್ ಬಳಿ ನಾನು ಹೋದರೆ, ಓಡಿ ಬಂದು ತಬ್ಬಿಕೊಳ್ಳುತ್ತಿದ್ದಳು. ಬುಧವಾರ ಬೆಳಗ್ಗೆ ತಾಯಿ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದಾಳೆ. ನಮಗೆ ಸಂಜೆ ಟೀಂ ಅಕಾಡೆಮಿಯವರು ಫೋನ್ ಮಾಡಿ, ವಿಷಯ ತಿಳಿಸಿದರು. ತಮ್ಮ ಮಗಳು ರಂಜಿತಾ ಸಾವಿನ ಬಗ್ಗೆ ತಮಗೆ ಅನುಮಾನವಿದೆ. ರಂಜಿತಾ ಸಾವಿನ ಬಗ್ಗೆ ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ನಿಂಗಪ್ಪ ಕಣ್ಣೀರು ಹಾಕಿದರು.

- - -

(ಬಾಕ್ಸ್‌)* ವಿದ್ಯಾರ್ಥಿನಿ ರಂಜಿತಾ ಸಾವಿನ ಬಗ್ಗೆ ಹೇಳಿಕೆ ಟೀಂ ಅಕಾಡೆಮಿ ಕಾಲೇಜು ಅಧ್ಯಕ್ಷ ಕೆ.ಎಂ.ಮಂಜಪ್ಪ, ತಮ್ಮ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ ನಾಲ್ಕು ದಿನದ ಹಿಂದೆ ತಮ್ಮ ಸ್ವಂತ ಊರಿಗೆ ಹೋಗಿ ಬಂದಿದ್ದಳು. ಊರಿನಿಂದ ಬಂದಾಗಿನಿಂದ ಆಕೆ ಖಿನ್ನತೆಯಲ್ಲಿದ್ದಳೆಂಬ ಮಾಹಿತಿ ಇತ್ತು. ಬುಧವಾರ ಸಂಜೆ 5.30ಕ್ಕೆ ಹಾಸ್ಟೆಲ್‌ಗೆ ಹೋಗಿದ್ದಳು. ರಾತ್ರಿ 8.30ಕ್ಕೆ ರಂಜಿತಾ ರೂಮ್‌ಮೇಟ್ಸ್‌ ಹಾಸ್ಟೆಲ್‌ಗೆ ಹೋಗಿ, ಕೊಠಡಿ ಬಾಗಿಲು ಬಡಿದರೂ ತೆಗೆದಿಲ್ಲ. ಆಗ ವಾರ್ಡನ್‌ಗೆ ವಿಷಯ ತಿಳಿದು, ನನಗೆ ಕರೆ ಮಾಡಿದ್ದರು. ಆಗ ಪೊಲೀಸರು, ರಂಜಿತಾ ಪಾಲಕರಿಗೆ ವಿಷಯ ಮುಟ್ಟಿಸಿದ್ದೆವು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರಂಜಿತಾ ತಂದೆ ದಾವಣಗೆರೆಯಲ್ಲಿದ್ದ ತಮ್ಮ ಸಂಬಂಧಿಯನ್ನು ಹಾಸ್ಟೆಲ್‌ಗೆ ಕಳಿಸಿಕೊಟ್ಟಿದ್ದರು. ವಿದ್ಯಾರ್ಥಿನಿಯ ಪೋಷಕರ ಸಮ್ಮುಖದಲ್ಲೇ ಬಾಗಿಲು ಒಡೆದು ನೋಡಿದಾಗ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಹಾಸ್ಟೆಲ್‌ನ ಕೊಠಡಿಯಲ್ಲಿ ಯಾವುದೇ ತರಹದ ಡೆತ್ ನೋಟ್ ಸಿಕ್ಕಿಲ್ಲ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಿದ್ಯಾರ್ಥಿನಿ ರಂಜಿತಾ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು. ಈಗ ಮೃತಳ ತಂದೆ, ತಾಯಿ ನೋವಿನಲ್ಲಿದ್ದಾರೆ. ಕೊಲೆ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆಯಲಿ, ಸತ್ಯ ಏನು ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

- - -

-(ಫೋಟೋ ಇದೆ)