ಶ್ರಾವಣದ ಹಬ್ಬಗಳ ವೇಳೆ ಒಂದಿಷ್ಟು ವ್ಯಾಪಾರ ಮಾಡುತ್ತಿದ್ದ ಹೂವಿನ ವ್ಯಾಪಾರಸ್ಥರು, ಹಣ್ಣು ಕಾಯಿ ವ್ಯಾಪಾರಸ್ಥರು, ಬಾಳೆ ಕಂಬ, ಮಾವಿನ ತೊಪ್ಪಲು ವ್ಯಾಪಾರಸ್ಥರಿಗೆ ಗುರುವಾರ ಬೆಳಗ್ಗೆ ನಗರದ ಹಳೇ ಪ್ರವಾಸಿ ಮಂದಿರ ರಸ್ತೆಯಲ್ಲಿ ವ್ಯಾಪಾರಕ್ಕೆ ಸ್ಥಳಾವಕಾಶ ಇಲ್ಲದೇ, ಹಳೇ ಪಿ.ಬಿ. ರಸ್ತೆಯಲ್ಲೇ ದಿಢೀರ್‌ ವ್ಯಾಪಾರಕ್ಕೆ ಮುಂದಾಗಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

- ಹಳೆ ಪ್ರವಾಸಿ ಮಂದಿರ ರಸ್ತೆ ಕಾಮಗಾರಿ ಹಿನ್ನೆಲೆ ಪಿಬಿ ರಸ್ತೆ ಬದಿಗೆ ಬಂದ ವ್ಯಾಪಾರಸ್ಥರು,- ಸಂಚಾರಕ್ಕೆ ಅಡ್ಡಿಯಾಗದಂತೆ ತಾತ್ಕಾಲಿಕ ಬಸ್ಸು ಸ್ಟ್ಯಾಂಡ್‌ ಜಾಗಕ್ಕೆ ಸ್ಥಳಾಂತರಗೊಳ್ಳಿರಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರಾವಣದ ಹಬ್ಬಗಳ ವೇಳೆ ಒಂದಿಷ್ಟು ವ್ಯಾಪಾರ ಮಾಡುತ್ತಿದ್ದ ಹೂವಿನ ವ್ಯಾಪಾರಸ್ಥರು, ಹಣ್ಣು ಕಾಯಿ ವ್ಯಾಪಾರಸ್ಥರು, ಬಾಳೆ ಕಂಬ, ಮಾವಿನ ತೊಪ್ಪಲು ವ್ಯಾಪಾರಸ್ಥರಿಗೆ ಗುರುವಾರ ಬೆಳಗ್ಗೆ ನಗರದ ಹಳೇ ಪ್ರವಾಸಿ ಮಂದಿರ ರಸ್ತೆಯಲ್ಲಿ ವ್ಯಾಪಾರಕ್ಕೆ ಸ್ಥಳಾವಕಾಶ ಇಲ್ಲದೇ, ಹಳೇ ಪಿ.ಬಿ. ರಸ್ತೆಯಲ್ಲೇ ದಿಢೀರ್‌ ವ್ಯಾಪಾರಕ್ಕೆ ಮುಂದಾಗಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಗರದ ಹಳೇ ಪಿ.ಬಿ. ರಸ್ತೆಯಲ್ಲಿ ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ಬಂದ್ ಮಾಡಿದ್ದು, ಅದೇ ರಸ್ತೆಯಲ್ಲಿ ಹೂವು, ಹಣ್ಣು, ಕಾಯಿ, ಬಾಳೆ ಕಂದ, ಮಾವಿನ ತೊಪ್ಪಲು ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ಬೀದಿಬದಿ ವ್ಯಾಪಾರಸ್ಥರು, ಗ್ರಾಮೀಣರು, ರೈತ ಮಹಿಳೆಯರು ತಾವು ಬಂದಿದ್ದ ಹೂವು, ಹಣ್ಣು ಮಾರಾಟಕ್ಕೆ ಆರ್‌.ಎಚ್‌.ಛತ್ರ ಮತ್ತು ಪಾಲಿಕೆ ಮುಂಭಾಗದ ಹಳೇ ಪಿ.ಬಿ. ರಸ್ತೆ ಪಕ್ಕದಲ್ಲಿ ಕುಳಿತು, ವ್ಯಾಪಾರ ಶುರು ಮಾಡಿದರು.

ರೈಲ್ವೆ ನಿಲ್ದಾಣದ ಕಡೆಯಿಂದ ಬಂದ ವಾಹನಗಳು ಪಾಲಿಕೆ ಕಡೆ ಆರ್.ಎಚ್‌.ಛತ್ರದ ಎದುರು ಯು ಟರ್ನ್‌ ತೆಗೆದುಕೊಳ್ಳಲು ಕಷ್ಟವಾಗುವಂತೆ ಹೂವು, ಹಣ್ಣು ಇತರೆ ವ್ಯಾಪಾರಸ್ಥರು ಸೇರಿದ್ದರಿಂದ ಅಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು. ದ್ವಿಚಕ್ರ ವಾಹನ ಯು ಟರ್ನ್‌ಗೆ ಸಮಸ್ಯೆ ಆಗದಿದ್ದರೂ, ಲಘು ವಾಹನ, ಮಿನಿ ಸರಕು ಸಾಗಾಣಿಕೆ ವಾಹನ, ಬಸ್ಸು, ಲಾರಿಗಳು ಯು ಟರ್ನ್‌ಗೆ ತೀವ್ರ ಸಮಸ್ಯೆಯಾಗಿ, ನೋಡ ನೋಡುತ್ತಿದ್ದಂತೆ ಹಳೆ ಪಿ.ಬಿ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಧಕ್ಕೆ ಆಗಿದ್ದರಿಂದ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಪಾಲಿಕೆ ಆಯುಕ್ತ ಡಾ.ಮಹಾಂತೇಶ ವಾಹನ ಪಿಡಬ್ಲ್ಯುಡಿ ಕಚೇರಿ ಎದುರು ಸಾಗಿ, ಪಾಲಿಕೆಯತ್ತ ಯು ಟರ್ನ್‌ ತೆಗೆದುಕೊಳ್ಳಲು ಕಷ್ಟಪಡುವಂತಾಯಿತು. ಅನಂತರ ಸಂಚಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೈಲಜಾ ಹಾಗೂ ಸಿಬ್ಬಂದಿ ಹೂವು ಹಣ್ಣಿನ ವ್ಯಾಪಾರಸ್ಥರಿಗೆ ತೆರವು ಮಾಡುವಂತೆ ಸೂಚಿಸಿದರು. ಆಗ ಒಂದಿಷ್ಟು ವಾಗ್ವಾದವೂ ಆಯಿತು. ತಾಳ್ಮೆ ಕಳೆದುಕೊಳ್ಳದ ಎಸ್ಐ ಶೈಲಜಾ ಕಾಮಗಾರಿ ಕೈಗೊಂಡಿದ್ದರಿಂದ ಒಂದೆರೆಡು ತಿಂಗಳು ಸಮಸ್ಯೆಯಾಗುತ್ತದೆ. ನೀವೂ ಸಹಕರಿಸಿ ಎಂದು ಮನವೊಲಿಸಿದರು.

ಅಲ್ಲಿಂದ ಪಾಲಿಕೆ ಆಯುಕ್ತ ಡಾ.ಮಹಾಂತೇಶರನ್ನು ಭೇಟಿ ಮಾಡಿ, ಸಮಸ್ಯೆ ಹೇಳಿಕೊಳ್ಳಲು ಹೂವಿನ ವ್ಯಾಪಾರಸ್ಥರ ಪುರುಷರು, ಮಹಿಳೆಯರು ತೆರಳಿದರು. ಆಗ ಸಂಘಟನೆಯೊಂದರ ಮುಖಂಡರು, ಹಳೇ ಪಿ.ಬಿ. ರಸ್ತೆಯಲ್ಲಿ ಒಂದು ಬದಿ ವಾಹನ ಸಂಚಾರಕ್ಕೆ, ಇನ್ನೊಂದು ಬದಿಯಲ್ಲಿ ವ್ಯಾಪಾರಕ್ಕೆ ಗಾಂಧಿ ವೃತ್ತದಿಂದ ಪಾಲಿಕೆವರೆಗೂ ಅವಕಾಶ ಮಾಡಿಕೊಡುವಂತೆ ಹೇಳಿದರು. ಆಗ ಪಾಲಿಕೆ ಆಯುಕ್ತರು ಅದು ತಮ್ಮ ವ್ಯಾಪ್ತಿಯಲ್ಲಿಲ್ಲ. ಜಿಲ್ಲಾಡಳಿತ, ಪಿಡಬ್ಲ್ಯುಡಿ ಇಲಾಖೆಗೆ ಮನವಿ ಮಾಡಿ. ಆಕಸ್ಮಾತ್ ನೀವು ಹೇಳಿದಂತೆ ಮಾಡಿ, ಯಾವುದಾದರೂ ವಾಹನ ಜನರ ಮೇಲೆ, ವ್ಯಾಪಾರ ಮಾಡುತ್ತಿದ್ದವರ ಮೇಲೆ ಹರಿದು, ಸಾವು ನೋವುಗಳಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸದ್ಯಕ್ಕೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಖಾಸಗಿ ಬಸ್ಸು ನಿಲ್ದಾಣದ ಶೆಲ್ಟರ್‌ಗಳಿವೆ. ಲಕ್ಷ್ಮೀ ಪೂಜೆ, ಗಣೇಶ ಹಬ್ಬ, ದಸರಾ ಹಬ್ಬ, ದೀಪಾವ‍ಳಿವರೆಗೆ ನೀವೆಲ್ಲ ಒಂದೇ ಕಡೆ ವ್ಯಾಪಾರ ಮಾಡಿ. ಹಳೆ ಪ್ರವಾಸಿ ಮಂದಿರದ ಬಳಿ ಪಿಡಬ್ಲ್ಯುಡಿ ಇಲಾಖೆ ಕಾಮಗಾರಿ ಕೈಗೊಂಡಿದೆ. ಇನ್ನು 2-3 ತಿಂಗಳು ಕಾಮಗಾರಿ ಸಾಗುವ ಸಾಧ್ಯತೆ ಇದೆ. ಹಾಗಾಗಿ ನಿಮಗೂ ತೊಂದರೆ ಆಗಬಾರದು, ವಾಹನ ಸಂಚಾರಕ್ಕೂ ಧಕ್ಕೆ ಆಗಬಾರದೆಂದರೆ ಹೈಸ್ಕೂಲ್ ಮೈದಾನದ ಹಳೆ ಖಾಸಗಿ ಬಸ್ಸು ನಿಲ್ದಾಣದ ಜಾಗದಲ್ಲಿ ಯಾವುದೇ ತೊಂದರೆ ಇಲ್ಲದೇ ವ್ಯಾಪಾರ ಮಾಡಿ ಎಂದು ಮನವೊಲಿಸಿದರು.

ನಿಮ್ಮ ಬೇಡಿಕೆ ಬಗ್ಗೆ ಪಿಡಬ್ಲ್ಯುಡಿ, ಪೊಲೀಸ್ ಹಾಗೂ ಸಂಚಾರ ಠಾಣೆಯ ಅಧಿಕಾರಿಗಳು, ವೃತ್ತ ನಿರೀಕ್ಷಕರ ಜೊತೆ ಚರ್ಚಿಸುತ್ತೇವೆ. ಅವಕಾಶ ಇದ್ದರೆ ಏನಾದರೂ ಮಾಡುತ್ತೇವೆ. ಇಲ್ಲವೆಂದರೆ ಕಷ್ಟ. ನಿಮ್ಮ ವಿಚಾರದ ಬಗ್ಗೆಯೂ ಯೋಚಿಸಬೇಕು. ಸುಗಮ ವಾಹನ ಸಂಚಾರದ್ದೂ ನೋಡಬೇಕು. ಬರುವ ಹಬ್ಬಗಳು ಮುಗಿಯುವವರೆಗಾದರೂ ನೀವೆಲ್ಲಾ ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರವಾಗಿ. ಹಬ್ಬ ಮಾಡುವವರು ಹೂವು, ಹಣ್ಣು, ಹಂಪಲು, ಬಾಳೆಕಂಬ, ಮಾವಿನ ತೊಪ್ಪಲು ಸಿಗುವ ಕಡೆಗೆ ಬಂದು ಖರೀದಿಸುತ್ತಾರೆ. ಅದರ ಬಗ್ಗೆ ಚಿಂತೆ ಮಾಡಬೇಡಿ. ನೀವೆಲ್ಲಾ ಒಂದೇ ಕಡೆ ವ್ಯಾಪಾರ ಮಾಡಿ, ಸಹಕರಿಸಿ ಎಂದು ಪಾಲಿಕೆ ಆಯುಕ್ತ ಡಾ.ಮಹಾಂತೇಶ ತಿಳಿ ಹೇಳಿದರು.

ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು ಮಾತನಾಡಿ, ಹೂವು, ಬಾಳೆಕಂಬ, ಮಾವಿನ ತೊಪ್ಪಲು, ಹಣ್ಣು ಮಾರಾಟಕ್ಕೆ ನೀವೆಲ್ಲರೂ ಒಂದೇ ಕಡೆಗೆ ಹೋಗಿ. ನಿಮ್ಮಲ್ಲಿ ಒಗ್ಗಟ್ಟು ಇರಬೇಕು. ನೀವು ಸ್ಥಳಾಂತರ ಆಗಬೇಕು. ವಾಹನ ಸಂಚಾರದ ವಿಚಾರ ನಮ್ಮ ಪಾಲಿಕೆಗೆ ಸಂಬಂಧಿಸಿದ್ದಲ್ಲ. ಹಬ್ಬದ ನಂತರ ಕಸವನ್ನು ನಾವು ತೆರವು ಮಾಡಿಸಬಹುದು.

ರಸ್ತೆ ಸುರಕ್ಷತೆ ಮಾಡಬೇಕಾದ್ದು ಸಂಚಾರ ಪೊಲೀಸರು. ಸಂಬಂಧಿಸಿದ ಠಾಣೆ ಅಧಿಕಾರಿಗಳಿಗೂ ಆಯುಕ್ತರು ಮಾತನಾಡುತ್ತಾರೆ. ಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬ ಬರುತ್ತಿದ್ದು, ಆಯುಕ್ತರು ಸಹ ನಿಮಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಾರೆ ಎಂದು ಭರವಸೆ ನೀಡಿದರು. ಹೂವಿನ ವ್ಯಾಪಾರಸ್ಥರು, ಹಣ್ಣು ಹಂಪಲು, ಬಾಳೆ ಕಂಬ, ಮಾವಿನ ತೊಪ್ಪಲು ವ್ಯಾಪಾರಸ್ಥರು ಇದ್ದರು.

- - -

-3ಕೆಡಿವಿಜಿ3: ದಾವಣಗೆರೆ ಆರ್.ಎಚ್‌.ಛತ್ರದ ಬಳಿ ಹೂವು ಹಣ್ಣು ವ್ಯಾಪಾರ ಮಾಡುತ್ತಿದ್ದವರನ್ನು ಬೇರೆಡೆ ಸ್ಥಳಾಂತರಿಸುವಂತೆ ಸಂಚಾರ ಠಾಣೆ ಸಬ್ ಇನ್ಸ್‌ಪೆಕ್ಟರ್ ಶೈಲಜಾ ಮನವೊಲಿಸುತ್ತಿರುವುದು. -3ಕೆಡಿವಿಜಿ4, 5: ದಾವಣಗೆರೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಲು ಕಾದು ಕುಳಿತಿರುವ ಹೂವು, ಹಣ್ಣು ವ್ಯಾಪಾರಸ್ಥರು, ರೈತ ಮಹಿಳೆಯರು.