ಬದ್ಧತೆಯೊಂದಿಗೆ ಸಮಾಜ ಪರಿವರ್ತನೆಗೂ ಸಹಕರಿಸಿ

KannadaprabhaNewsNetwork |  
Published : Jul 07, 2026, 01:15 AM IST
9 | Kannada Prabha

ಸಾರಾಂಶ

ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ವೃತ್ತಿಯ ಶೇ.50ರಷ್ಟನ್ನು ಸಮಾಜದ ಸೇವೆಗಾಗಿ ಮುಡುಪಾಗಿಡಬೇಕು ಎಂದು ಹುಬ್ಬಳ್ಳಿಯ ರಾಜ್ಯಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಕಾನೂನು ಪದವಿ ಪಡೆದು ವೃತ್ತಿ ಬದುಕು ಆರಂಭಿಸುವ ನವ ವಕೀಲರಿಗೆ ವೃತ್ತಿ ಗೌರವದ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ. ವೃತ್ತಿಯಲ್ಲಿ ಬದ್ಧತೆ, ನಿಷ್ಠೆ, ಜ್ಞಾನ ವೃದ್ಧಿಯ ಜೊತೆಗೆ ಅರ್ಪಣಾ ಮನೋಭಾವ ಬೆಳೆಸಿಕೊಂಡು ಸಾಮಾಜಿಕ ಪರಿಸರದಲ್ಲಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬಹುದು.ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ವೃತ್ತಿಯ ಶೇ.50ರಷ್ಟನ್ನು ಸಮಾಜದ ಸೇವೆಗಾಗಿ ಮುಡುಪಾಗಿಡಬೇಕು ಎಂದು ಹುಬ್ಬಳ್ಳಿಯ ರಾಜ್ಯಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.ಸೋಮವಾರ ನಗರದ ವಿದ್ಯೋದಯ ಕಾನೂನು ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಕಾನೂನು ಪದವಿಧರರಿಗೆ ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿದ ಅವರು, ಕಾನೂನು ಪದವಿ ಪಡೆದ ಮೇಲೆ ನೂರು ವಕೀಲರ ನಡುವೆ ತಾವು ಶ್ರೇಷ್ಠ ವಕೀಲರಾಗಿ ಬೆಳೆಯುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಪೂರಕ ಜ್ಞಾನ, ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು. ವಕೀಲರು ಯಾವತ್ತೂ ಸಮಾಜಮುಖಿಗಳಾಗಬೇಕು. ಅಸಹಾಯಕರಿಗೆ ಕಾನೂನು ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ನ್ಯಾಯ ಒದಗಿಸಿ ಸಮಾಜ ಪರಿವರ್ತನೆಗೂ ಸಹಕರಿಸಬೇಕು ಎಂದು ಸಲಹೆ ಮಾಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಅನೇಕ ಸಮಸ್ಯೆಗಳು ನಿವಾರಣೆ ಆಗದೆ ಉಳಿದಿವೆ. ಶೇಕಡ 85 ರಷ್ಟು ಜನರಿಗೆ ಈ ನೆಲದ ಕಾನೂನಿನ ಅರಿವಿಲ್ಲ. ಬಡತನ, ಕಾನೂನಿನ ಅಜ್ಞಾನ, ಅನಕ್ಷರತೆ ಮುಂತಾದ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲು ಹತ್ತುವ ಶಕ್ತಿ, ತಿಳವಳಿಕೆ ಅವರಿಗೆಇರುವುದಿಲ್ಲ. ಯುವ ವಕೀಲರು ಅಂತಹವರಿಗೆ ಕಾನೂನು ಮಾರ್ಗದರ್ಶನ ನೀಡಿ ಸಹಾಯ ಮಾಡಬೇಕು. ಶಾಸಕಾಂಗ, ಕಾರ್ಯಾಂಗಗಳ ಲೋಪಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ, ಸರಿಪಡಿಸುವ ಸಾಮಾಜಿಕ ಕಳಕಳಿ ಎಲ್ಲರಿಗಿಂಥಾ ವಕೀಲರಲ್ಲಿ ಹೆಚ್ಚಾಗಿರಬೇಕು. ನಮ್ಮಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥವೂ ವಿಳಂಬವಾಗುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ಹುಡುಕಿ ನಿವಾರಣೆ ಮಾಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ವಿದ್ಯೋದಯ ಫೌಂಡಶನ್‌ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಎಚ್.ಎಸ್. ರಾಜು ಮಾತನಾಡಿ, ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಾಗೂ ಇತರರಿಗೆ ಪ್ರೇರಣೆ ನೀಡಲು ಕಾನೂನು ಪದವಿಯಲ್ಲಿ ಮೊದಲ ಸ್ಥಾನ ಪುರಸ್ಕೃತರಿಗೆ ವಿತರಿಸಲು ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರೊ.ಎಚ್.ಎಸ್. ಶೇಷಾದ್ರಿ ಸ್ಮಾರಕ ಪ್ರಶಸ್ತಿ ಸ್ಥಾಪನೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೊ.ಕೆ.ಚಂದ್ರಣ್ಣ ಮಾತನಾಡಿ, ವಕೀಲರು ಸಮಾಜಮುಖಿಗಳಾಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು ದೊರಕಿಸುವ ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು. ಕಾಲೇಜಿನ ಪ್ರಚಾರ್ಯರಾದ ಶಮಾ ಸೈದಿ ಸ್ವಾಗತಕೋರಿ, ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎ. ನಾರಾಯಣಸ್ವಾಮಿ, ಟ್ರಸ್ಟಿಗಳಾದ ಕಸ್ತೂರಿರಮೇಶ್ ಪೈ, ಕೃಷ್ಣಯ್ಯ, ಆರ್.ಎ. ಸುರೇಶ್‌ಕುಮಾರ್, ಎನ್.ಜಿ. ಮಂಜುನಾಥ್, ಡಾ.ಎಸ್. ಗಂಗಾಧರ್, ಶೈಕ್ಷಣಿಕ ಸಮಿತಿ ಸದಸ್ಯರಾದ ಕೆ.ವಿ. ರೂಪ, ಕೆ.ಎಸ್. ಪುಷ್ಪ ಹಾಗೂ ಕಾಲೇಜಿನ ಬೋಧಕ ವರ್ಗದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ