ಶಿಗ್ಗಾಂವಿ: ಜಿಲ್ಲೆಗಳಲ್ಲಿ ಇತ್ತೀಚೆಗೆ ಡೆಂಘೀ ಮತ್ತು ಚಿಕೂನ್ ಗುನ್ಯಾ ಜ್ವರ ಹರಡುತ್ತಿದೆ. ಈ ರೋಗವು ಈಡೀಸ್ ಸೊಳ್ಳೆಯಿಂದ ಹರಡುತ್ತಿದೆ. ಈ ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರ ಕೈಯಲ್ಲಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘೀ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡೆಂಘೀ ಟಾಸ್ಕ್ ಫೋರ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗ್ರಾಮಗಳಲ್ಲಿ ಡೆಂಘೀ ಕುರಿತು ಜಾಥಾ ಮತ್ತು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ನೀರು ನಿಲ್ಲದ ಹಾಗೆ ನೋಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ರೋಗ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಎ.ಆರ್. ಮಾತನಾಡಿ, ಈಡಿಸ ಸೊಳ್ಳೆ ಉತ್ಪತ್ತಿಯಾಗುವ ಮನೆ ಒಳಗಿನ ಫ್ರಿಜ್, ಎರ್ ಕೂಲರ್, ಅಲಂಕೃತ ಗಿಡಗಳ ಕಾಂಡಗಳನ್ನು ವಾರಕ್ಕೊಮ್ಮೆ ಸ್ವಚ್ಛ ಗೊಳಿಸಿ ಡೆಂಘೀ ಹರಡದಂತೆ ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಇಓ ವಿಶ್ವನಾಥ ಪಿ., ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಕೃಷಿ ಇಲಾಖೆ ನಿರ್ದೇಶಕ ಸುರೇಶ ದೀಕ್ಷಿತ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್. ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಡಾ. ಸುರೇಶ ಪೂಜಾರ, ಡಾ. ಗೈಬು ನಾಯಕರ, ಡಾ.ಸರಳಾ ನಾಲವಾಡ, ಡಾ. ನೇಮಾವತಿ, ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ರಾಮನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.