ಸ್ಟಾರ್ಟಪ್ಸ್ ಶಿಬಿರ
ಕನ್ನಡಪ್ರಭ ವಾರ್ತೆ ಹಾಸನನಮ್ಮ ದೇಶದಲ್ಲಿ ಅನೇಕರು ಪದವಿಯನ್ನು ಪಡೆದು ಉದ್ಯೋಗ ಬೇಕೆಂದು ಹುಡುಕಾಟದಲ್ಲಿರುವ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿ ಮಾಡುವಂತಹ ಸ್ವಯಂ ಉದ್ಯೋಗ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುವಂತರಾಗಬೇಕು ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ಸಲಹೆ ನೀಡಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿಯಂ ಸಭಾಂಗಣದಲ್ಲಿ ಮಿ-ರೆಜ್ ಫೌಂಡೇಷನ್ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸ್ಟಾರ್ಟಪ್ಸ್ ಕುರಿತ ಎರಡು ದಿನಗಳ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ದಿನದ ಉಪಯುಕ್ತ ಶಿಬಿರದ ಲಾಭ ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಹಾರೈಸಿದರು.ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಮಿ-ರೆಜ್ ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ಗೀತಾ ಕಿರಣ್ ಮಾತಾನಾಡಿ, ನಾವು ಕಲಿತಾ ಶಿಕ್ಷಣ ಹಾಗೂ ಅನುಭವ ಇತರರಿಗೆ ಪ್ರಯೋಜನವಾಗಬೇಕು ಮತ್ತು ಸಮಾಜ ಸುಧಾರಣೆಯಲ್ಲಿ ಪ್ರಮುಖವಾಗಿ ಅನೂಕೂಲವಾಗುವಂತಾಗಬೇಕು ಎಂದು ತಿಳಿಸಿದರು.
ಮಂಗಳೂರು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿಗಳಾದ ಜಾನ್ಸನ್ ಟೆಲ್ಸ್ ಅವರು, ವಿವಿಧ ಕಾಲೇಜಿನಿಂದ ಬಂದಂತವರಿಗೆ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ಹೇಗೆ ತರಬಹುದು ಮತ್ತು ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಹೇಗೆ ಉಪಯೋಗಿಸಬೇಕು ಎಂದು ಮಾಹಿತಿ ನೀಡಿದರು.ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ ಮಾತನಾಡಿ, ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಬಿ.ಐ.ಟಿ. ಎಂಜಿನಿಯರಿಂಗ್ ಕಾಲೇಜ್ ಬೆಂಗಳೂರು, ಸಿ ಐ ಟಿ ಗುಬ್ಬಿ, ಎಲ್ ಬಿ ಎಸ್ ಕಾಸರಗೋಡು, ಎಂ ಐ ಟಿ ಮೈಸೂರು, ಎಂ ಐ ಟಿ ಪಾಂಡುಪುರ ಈ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತರಬೇತಿ ಪಡೆಯಲು ಆಗಮಿಸಿರುವವರಿಗೆ ಶುಭ ಕೋರಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮ್ಯಾನೇಜರ್ ಶಿವರಾಮ್ ಕೃಷ್ಣಯ್ಯ, ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಡಾ.ಎಸ್. ಪ್ರದೀಪ್ ಮಾತನಾಡಿದರು. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಶ್ರೀಧರ್, ನಿರ್ದೇಶಕರಾದ ಚೌಡುವಳ್ಳಿ ಜಗದೀಶ್, ಎಚ್.ಕೆ. ಗುರುಮೂರ್ತಿ ಇತರರು ಹಾಜರಿದ್ದರು.