ಕನ್ನಡಪ್ರಭ ವಾರ್ತೆ, ತುಮಕೂರುಕಲುಷಿತ ನೀರು, ಮಾಲಿನ್ಯ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪದಂತಹ ದೂರುಗಳಿದ್ದಲ್ಲಿ ಸಾರ್ವಜನಿಕರು ಕಂಟ್ರೋಲ್ ರೂಂ ನಂಬರಿಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿರುವ ಬಗ್ಗೆ ಪ್ರಯೋಗಾಲಯದ ವರದಿ ಬಂದಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಅಲ್ಲದೆ ಬಯಲು ಶೌಚ ಇನ್ನಿತರ ಸಾಂಕ್ರಾಮಿಕ ರೋಗ ಹರಡಬಹುದಾದ ವಿಷಯಗಳ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಸಾಂಕ್ರಾಮಿಕ ರೋಗಗಳು ಹರಡಬಹುದಾದ ವಿದ್ಯಾರ್ಥಿ ನಿಲಯಗಳ ನೀರು ಸರಬರಾಜು, ಜಾತ್ರೆ, ಹಬ್ಬಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕೆಂದು ತಿಳಿಸಿದ ಅವರು, ತಮ್ಮ ತಾಲೂಕುಗಳಲ್ಲಿ ಯಾವ ಹಬ್ಬ, ಜಾತ್ರೆಗಳು ನಡೆಯುತ್ತವೆ, ಹೆಚ್ಚು ಜನರು ಸೇರುವ ಜಾಗಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಜಾತ್ರೆ ಮತ್ತು ಹಬ್ಬ ಆಚರಣೆಗೆ ಅನುಮತಿಸುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಹಾಗೂ ಎಚ್ಚರಿಕೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು. ಊರುಹಬ್ಬ, ಜಾತ್ರೆ ನಡೆಸಲು ತಹಸೀಲ್ದಾರ್ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ತಾಲೂಕು ಆಡಳಿತದ ಅನುಮತಿ ಇಲ್ಲದೆ ಹಬ್ಬ ಅಥವಾ ಜಾತ್ರೆ ನಡೆದ ಬಗ್ಗೆ ದೂರುಗಳು ಬಂದರೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಎಲ್ಲಾ ಗ್ರಾಮ ವಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಆಯೋಜನೆಗೊಳ್ಳುವ ಊರ ಹಬ್ಬ/ಜಾತ್ರೆಗಳ ವೇಳೆ ಆಹಾರ/ಪ್ರಸಾದ ಮತ್ತು ಕುಡಿಯುವ ನೀರಿನಿಂದ ಹರಡಬಹುದಾದ ಕಾಯಿಲೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೈಯಕ್ತಿಕ ಗಮನಹರಿಸಿ ಆರೋಗ್ಯ ಇಲಾಖೆ ಸಮನ್ವಯದೊಂದಿಗೆ ಸಂಪೂರ್ಣ ಮೇಲುಸ್ತುವಾರಿ ವಹಿಸಲು ಸೂಚಿಸಿದರು.
ಆಹಾರ/ಪ್ರಸಾದ ತಯಾರಿಸಲು ಬಳಸುವ ನೀರು ಮತ್ತು ಅಡುಗೆ ಪ್ರದೇಶದ ಸುತ್ತಮುತ್ತ ಶುಚಿತ್ವದ ಬಗ್ಗೆ, ಪರಿವೀಕ್ಷಣೆ ನಡೆಸಬೇಕಲ್ಲದೆ, ಕುಡಿಯುವ ನೀರು, ಆಹಾರ, ಪ್ರಸಾದ ವಿತರಿಸುವವರು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ವಿಸರ್ಜನೆ ಸ್ಥಳಗಳು ಮತ್ತು ಶೌಚಾಲಯಗಳಿಂದ ಅಗತ್ಯ ಅಂತರ ಕಾಪಾಡುವುದು, ತ್ಯಾಜ್ಯ ವಿಲೇವಾರಿ ಮಾಡುವುದೂ ಸೇರಿದಂತೆ ಮನೆಗಳಲ್ಲಿ ಎಲ್ಲಾ ಗ್ರಾಮಸ್ಥರು ಮುಖ್ಯವಾಗಿ ವೃದ್ಧರು, ಗರ್ಭಿಣಿ, ಬಾಣಂತಿ, ರೋಗಿಗಳು ಕಾಯಿಸಿ ಆರಿಸಿದ ನೀರನ್ನು ಸೇವಿಸುವಂತೆ ಸೂಚಿಸಿದರು.ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ತುಮಕೂರು ಜಿಲ್ಲೆಯ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಕೈಗೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಗಳ ಕುರಿತು ಯಾವುದೇ ಅಧಿಕಾರಿ ನಿರ್ಲಕ್ಷ್ಯತೆ ತೋರಿದ್ದಲ್ಲಿ ಅಂತಹ ಅಧಿಕಾರಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶನ ನೀಡಿದರು. ಮುಂದಿನ ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ತಾಲೂಕು ಮಟ್ಟದಲ್ಲಿ ನಡೆಸಿದ ಸಭೆಯ ಕುರಿತಾಗಿ ಜಿಲ್ಲಾ ಸಭೆಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಎಲ್ಲ ಹಂತದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.