ಮೈತ್ರಿಗೆ ಅಪಸ್ವರ: ಜೆಡಿಎಸ್‌ ಬೆಂಬಲಿತ ಪಕ್ಷೇತರ ಸ್ಪರ್ಧೆ?

KannadaprabhaNewsNetwork | Published : Apr 2, 2024 1:02 AM

ಸಾರಾಂಶ

ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಜಿಲ್ಲೆಯ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಂಜಾರಾ ಸಮುದಾಯದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಪಕ್ಷೇತರ ನಿಲ್ಲಿಸಿ ಪರೋಕ್ಷ ಬೆಂಬಲಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ಚಿಂತನೆ ನಡೆಸಿದ್ದಾರೆ.

ಆನಂದ್ ಎಂ. ಸೌದಿ

ಯಾದಗಿರಿ: ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಜಿಲ್ಲೆಯ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಂಜಾರಾ ಸಮುದಾಯದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಪಕ್ಷೇತರ ನಿಲ್ಲಿಸಿ ಪರೋಕ್ಷ ಬೆಂಬಲಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ಚಿಂತನೆ ನಡೆಸಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಾದಗಿರಿ ಜಿಲ್ಲೆ ವ್ಯಾಪ್ತಿಯ ಗುರುಮಠಕಲ್‌ ವಿಧಾನಸಭಾ ಮತಕ್ಷೇತ್ರದಲ್ಲಿ ತಾಂಡಾಗಳ (ಬಂಜಾರಾ) ಮತಗಳು ನಿರ್ಣಾಯಕ. ಡಾ.ಜಾಧವ್‌ ಅವರಿಗೆ ಪಾಟೀಸವಾಲು ಅನ್ನುವಂತೆ, ಇದರಿಂದಾಗಿ ಸಮುದಾಯದ ಮತಗಳ ವಿಭಜನೆ ಸಾಧ್ಯತೆ ಇದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.

"ದಳ "ಪತಿಗಳ ಕಡೆಗೆಣನೆ, ಕಂದಕೂರು ಚಿಂತನೆ:

ಬಿಜೆಪಿ- ಜೆಡಿಎಸ್‌ ಮೈತ್ರಿ ಪ್ರಸ್ತಾವದ ಆರಂಭದಲ್ಲೇ ಶಾಸಕ ಕಂದಕೂರ ತೀವ್ರ ಆಕ್ಷೇಪಿಸಿ, ಜೆಡಿಎಸ್‌ ರಾಜಕೀಯ ಭವಿಷ್ಯಕ್ಕೆ ಮೈತ್ರಿ ಮಾರಕವಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯಸಭೆ ಚುನಾವಣೆ ವೇಳೆ ಶಾಸಕ ಕಂದಕೂರರನ್ನು ಸಮಾಧಾನ ಪಡಿಸಿದ್ದ ಮಾಜಿ ಸಿಎಂ ಎಚ್ಡಿಕೆ ಹಾಗೂ ತಂಡ, ಮೈತ್ರಿ ಅಭ್ಯರ್ಥಿ ಪರವಾಗಿ ನಿಲ್ಲುವಂತೆ ಮಾಡಿದ್ದರು.

ಆದರೆ, ಈಗ ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ನಾಯಕರು ಮೈತ್ರಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಶಾಸಕ ಕಂದಕೂರು ಕಿಡಿ ಕಾರಿದ್ದಾರೆ. ಸ್ಥಳೀಯ ಜೆಡಿಎಸ್‌ ಶಾಸಕರು ಅಥವಾ ನಾಯಕರನ್ನು ವಿಶ್ವಾಸಕ್ಕೆ ಬಿಜೆಪಿ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್‌ ನಿರಾಸಕ್ತಿ ತೋರಿದಂತಿದೆ. ಮೋದಿ ಅಲೆ ಹಾಗೂ ಹೆಚ್ಚಿರುವ ಬಂಜಾರಾ ಸಮುದಾಯದ ಮತಗಳು ಹೇಗಿದ್ದರೂ ತಮಗೇ ಬೀಳಲಿವೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ ಎಂದು ಟೀಕಿಸಿರುವ ಶಾಸಕ ಕಂದಕೂರ, ಜೆಡಿಎಸ್‌ ಕಡೆಗೆಣಿಸಿದ ಬಗ್ಗೆ ತಮಗೆ ಹಾಗೂ ಬೆಂಬಲಿಗರಿಗೆ ನೋವಾಗಿದೆ. ಹೀಗಾಗಿ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಗುರುಮಠಕಲ್‌ ಭಾಗದ ಬಂಜಾರಾ ಸಮದಾಯದ ವ್ಯಕ್ತಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿಸಿ, ಪರೋಕ್ಷವಾಗಿ ಅವರಿಗೆ ಬೆಂಬಲಿಸುವ ಬಗ್ಗೆ ತಮ್ಮ ಮತಕ್ಷೇತ್ರದ ಅನೇಕರು ಹಾಗೂ ಅಭಿಮಾನಿಗಳು ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು. ಮುಂದಿನ ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 2,53,673 ಮತದಾರರಿದ್ದಾರೆ. ಇದರಲ್ಲಿ ಕೋಲಿ ಸಮಾಜ ಹಾಗೂ ಬಂಜಾರಾ ಸಮುದಾಯದ ಮತಗಳು ಮಹತ್ವದ ಪಾತ್ರವಹಿಸಲಿವೆ. ಕೋಲಿ ಸಮುದಾಯದ ಪ್ರಭಾವಿ ಮುಖಂಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ನಡೆಸಿದ್ದಾರೆ.

2023ರ ವಿಧಾನಸಭೆ ಚುನಾವಣೆ ವೇಳೆ ಬಂಜಾರಾ ಸಮುದಾಯದ (ತಾಂಡಾಗಳ) ಬಹುತೇಕ ಮತಗಳು ಜೆಡಿಎಸ್‌ ಅಭ್ಯರ್ಥಿ ಶರಣಗೌಡ ಪರವಾಗಿದ್ದವು ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ಪ್ರಮಾಣವಚನ ಸ್ವೀಕಾರ ವೇಳೆ ಬಂಜಾರಾ ಸಮುದಾಯದ ಸಂತ ಸೇವಾಲಾಲ್‌ ಹೆಸರನ್ನು ಉಲ್ಲೇಖಿಸಿದ್ದ ಕಂದಕೂರ, ತಮ್ಮ ಗೆಲುವಿನಲ್ಲಿ ಬಂಜಾರಾ ಸಮುದಾಯದ ಪಾತ್ರ ಮಹತ್ವದ್ದು ಎಂದಿದ್ದರು.

ಈಗ, ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಪಕ್ಷದ ಅಭ್ಯರ್ಥಿಗೆ ಗುರುಮಮಠಕಲ್‌ ಮತಗಳು ನಿರ್ಣಾಯಕವಾಗಲಿವೆ. ಬಂಜಾರಾ ಸಮುದಾಯದ ಪ್ರಮುಖರೊಬ್ಬರು ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರೆ ಡಾ.ಉಮೇಶ್‌ ಜಾಧವ್‌ಗೆ ಮತಗಳ ವಿಭಜನೆ ಕಾಡಬಹುದು ಎನ್ನುವುದು ರಾಜಕೀಯ ಲೆಕ್ಕಾಚಾರ.

Share this article