ಸಾಗರ: ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಜ.೧೮ರಂದು ಹಮ್ಮಿಕೊಂಡಿರುವ ಅಡಕೆ ಬೆಳೆಗಾರರ ಬೃಹತ್ ಸಮಾವೇಶ ಅಡಕೆ ಬೆಳೆ ಮತ್ತು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇರಿಸಲಿದೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಆಗಮಿಸುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಬಳಿ ಪ್ರಮುಖವಾಗಿ ಮಲೆನಾಡಿನ ಅಡಕೆ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.ಸುಪ್ರೀಂಕೋರ್ಟ್‌ನಲ್ಲಿ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಪ್ರಕರಣ ನಡೆಯುತ್ತಿದೆ. ಇದನ್ನು ಸಂಶೋಧನೆ ಮೂಲಕ ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಎಂದು ನಡೆಯುತ್ತಿರುವ ಚರ್ಚೆ ನಿಲ್ಲಬೇಕು. ಎಲೆಚುಕ್ಕೆ ರೋಗ, ಬೇರುಹುಳು ರೋಗಕ್ಕೆ ಆಧುನಿಕ ಔಷಧಿ ಕಂಡು ಹಿಡಿದು ಬೆಳೆಹಾನಿ ತಪ್ಪಿಸಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ಸಾಗರದಲ್ಲಿ ತೆರೆಯಬೇಕು.ಅಡಕೆ ಬೆಳೆಗಾರರು ಸೊಪ್ಪಿನಬೆಟ್ಟ, ಕಾನುಗಳನ್ನು ಪಾರಂಪರಾನುಗತವಾಗಿ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿನ ಮಣ್ಣು ಮತ್ತು ಸೊಪ್ಪು ಬಳಕೆಗೆ ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಬೇಕು. ಅಡಕೆಗೆ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಮೊತ್ತ ಹೆಚ್ಚಿಸಬೇಕು. ಅಡಕೆ ಆಮದು ಸುಂಕವನ್ನು ೩೫೨ ರು .ನಿಂದ ೪೫೨ರು.ಗೆ ಹೆಚ್ಚಿಸಬೇಕು. ಗಡಿಯಿಂದ ಮತ್ತು ಬಂದರುಗಳ ಮೂಲಕ ಭಾರತಕ್ಕೆ ಬರುವ ವಿದೇಶಿ ಅಡಕೆಯನ್ನು ನಿರ್ಬಂಧಿಸಬೇಕು. ಮೈಲುತುತ್ತಕ್ಕೆ ವಿಧಿಸುತ್ತಿರುವ ಜಿಎಸ್ಟಿಯನ್ನು ಶೇ.೫ಕ್ಕೆ ಇಳಿಸಬೇಕು. ಕಾಡುಪ್ರಾಣಿಗಳ ದಾಳಿಯಿಂದ ಹಾನಿಗೊಳಗಾಗುತ್ತಿರುವ ಫಸಲಿಗೆ ಪರಿಹಾರ ನೀಡಬೇಕು. ಈ ಎಲ್ಲ ಬೇಡಿಕೆಗಳ ಜೊತೆ ಮಲೆನಾಡಿನ ಅಡಕೆ ಬೆಳೆಗಾರರ ಜ್ವಲಂತ ಸಮಸ್ಯೆಯನ್ನು ಕೇಂದ್ರ ಕೃಷಿ ಸಚಿವರಿಗೆ, ರಾಜ್ಯ ತೋಟಗಾರಿಕಾ ಸಚಿವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಬೆಳೆಗಾರರು, ಅವಲಂಭಿತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಆಪ್ಸ್ಕೋಸ್ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ ಮಾತನಾಡಿದರು. ರಾಜಶೇಖರ ಹಂದಿಗೋಡು, ರಾಜೇಂದ್ರ ಖಂಡಿಕಾ, ಲಕ್ಷ್ಮಿನಾರಾಯಣ, ಅಣ್ಣಪ್ಪ.ಎಂ.ಪಿ ಇನ್ನಿತರರು ಇದ್ದರು.