ಗೋಕರ್ಣ: ಹಿಂದುಳಿದ ವರ್ಗದವರನ್ನು ಧರ್ಮ ಬೋಧನೆ ಮೂಲಕ ಮನಪರಿವರ್ತನೆ ಮಾಡಿ ಮತಾಂತರಕ್ಕೆ ಯತ್ನಸುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಮಧ್ಯಾಹ್ನ ತಲಗೇರಿ ಆಗೇರ ಕಾಲನಿಯಲ್ಲಿ ನಡೆದಿದೆ.
ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪಿಎಸ್ಐ ಖಾದರ್ ಬಾಷಾ ತಿಳಿವಳಿಕೆ ನೀಡಿ ಹೊರಗಿನಿಂದ ಬಂದವರನ್ನು ವಾಪಸ್ ಕಳುಹಿಸಿದ್ದಾರೆ.
ಈ ವೇಳೆ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಬಡವರಿಗೆ ಹಣದ ಆಮಿಷ ತೋರಿಸಿ ಈ ರೀತಿ ಘಟನೆ ನಡೆಯುತ್ತಿವೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಪಟ್ಟು ಹಿಡಿದರು.ಇಲ್ಲಿನ ಹಲವೆಡೆ ಹಿಂದುಳಿದ ವರ್ಗದ ಅನಾರೋಗ್ಯ ಪೀಡಿತರ ಮನೆ, ಬಡವರ ಮನೆಗೆ ತೆರಳಿ ಹಣದ ಆಮಿಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಬರುವಂತೆ ಮನ ಒಲಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಹಲವು ಹಿಂದುಳಿದ ವರ್ಗದ ಮಕ್ಕಳು ಕುತ್ತಿಗೆಯಲ್ಲಿ ಶಿಲುಬೆ ಹಾರ ಹಾಕಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದು, ಈ ಬಗ್ಗೆಯೂ ಪೊಲೀಸರು ವಿಚಾರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ವೇಳೆ ಗ್ರಾಪಂ ಸದಸ್ಯ ಗಣಪತಿ ನಾಯ್ಕ, ಸ್ಥಳೀಯರಾದ ಸೂರ್ಯ ನಾಯಕ, ವಿಶಾಲ ನಾಯಕ, ಗಣೇಶ ನಾಯಕ, ಸಂಜೀವ ನಾಯ್ಕ, ವಿನಯ ನಾಯ್ಕ, ಸಂಜಯ ನಾಯ್ಕ, ರಾಜೇಶ ನಾಯಕ, ಮಹೇಶ ನಾಯಕ ಇದ್ದರು.ಪವಿತ್ರ ಹಿಂದೂ ಕ್ಷೇತ್ರದಲ್ಲಿ ಈ ರೀತಿ ಘಟನೆ ನಡೆದಿದ್ದು ಅವಮಾನವಾಗಿದೆ. ಸಾರ್ವಜನಿಕರು ಒಂದಾಗಬೇಕು. ಹೊರಗಿನವರು ಬಂದು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುತ್ತಿರುವುದನ್ನು ತಡೆದು ಅವರನ್ನು ಪೊಲೀಸರಿಗೆ ನೀಡಲಾಗಿದೆ. ಇನ್ನು ಮುಂದೆ ನಮ್ಮ ಭಾಗದಲ್ಲಿ ಇಂತಹ ಮತಾಂತರದಂತಹ ಕೃತ್ಯ ನಡೆಸಿದರೆ ತಕ್ಕಶಾಸ್ತಿ ಮಾಡುತ್ತೇವೆ.-ಮಂಜುನಾಥ ಜನ್ನು, ಗ್ರಾಪಂ ಸದಸ್ಯ
ಮತಾಂತರ ಮಾಡುವವರ ವಿರುದ್ಧ ಪೊಲೀಸರ ಮೂಲಕವೇ ಕ್ರಮಕ್ಕೆ ಆಗ್ರಹಿಸಿದ್ದೇವೆ. ನಿರ್ಲಕ್ಷಿಸಿದರೆ ಮುಂದಿನ ದಿನದಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಸಮಾಜದವರು ಸಭೆ ಸೇರಿ ನಿರ್ಧಾರ ಕೈಗೊಳ್ಳುತ್ತೇವೆ. ಮಹೇಶ ಮೂಡಂಗಿ, ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ