ಬರಡು ಭೂಮಿಯ ಪರಿವರ್ತನೆ: ವಾರ್ಷಿಕ 50 ಲಕ್ಷ ರು. ಆದಾಯ

KannadaprabhaNewsNetwork | Published : May 20, 2025 1:22 AM
ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ತಾಲೂಕು ಒಕ್ಕಲಿಗರದ ಸಂಘದ ಅಧ್ಯಕ್ಷ ಶಿವರಾಂ ಅವರು ಸಾಲಿಗ್ರಾಮ ತಾಲೂಕು ಭೇರ್ಯ ಬಳಿ ಇರುವ ಗೇರುದಡ ಗ್ರಾಮದಲ್ಲಿ ಬರಡಾಗಿದ್ದ ಭೂಮಿಯನ್ನು ಪರಿವರ್ತಿಸಿ, ವಾರ್ಷಿಕ 50 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
Follow Us

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ತಾಲೂಕು ಒಕ್ಕಲಿಗರದ ಸಂಘದ ಅಧ್ಯಕ್ಷ ಶಿವರಾಂ ಅವರು ಸಾಲಿಗ್ರಾಮ ತಾಲೂಕು ಭೇರ್ಯ ಬಳಿ ಇರುವ ಗೇರುದಡ ಗ್ರಾಮದಲ್ಲಿ ಬರಡಾಗಿದ್ದ ಭೂಮಿಯನ್ನು ಪರಿವರ್ತಿಸಿ, ವಾರ್ಷಿಕ 50 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಸಾಲಿಗ್ರಾಮದವರಾದ ಶಿವರಾಂ ಡಿಪ್ಲೊಮಾ ಮಾಡಿ, ನಂತರ ಬಿ.ಇ ಮಾಡಿದವರು. ಈಗಿನ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಇವರ ಡಿಪ್ಲೊಮಾ ಸಹಪಾಠಿ ಅರಕಲಗೂಡು, ಬೆಟ್ಟದಪುರ, ವರುಣ, ಸಾಲಿಗ್ರಾಮ, ಮತ್ತೆ ಅರಕಲಗೂಡು, ಕೊಡಗು, ಬೆಂಗಳೂರು ಬಿಬಿಎಂಪಿ ಮೊದಲಾದ ಕಡೆ ಸೇವೆ ಸಲ್ಲಿಸಿ, 2022ರಲ್ಲಿ ನಿವೃತ್ತರಾಗಿದ್ದಾರೆ.

ಅವರಿಗೆ ಗೇರುದಡ ಗ್ರಾಮದಲ್ಲಿ 35 ಎಕರೆ ಜಮೀನಿದೆ. ನಾಲ್ಕು ಕೊಳವೆ ಬಾವಿಗಳಿವೆ. ಹೇಮಾವತಿ ನಾಲೆಯ ನೀರು ಕೆರೆಯ ಮೂಲಕವೂ ಸಿಗುತ್ತದೆ. ಅಲ್ಲಿ ತೇಗ-2000, ತೆಂಗು- 1000, ಮಾವು- 150, ಅಡಿಕೆ- 3000, ಕಾಫಿ- 5000, ಬಟರ್‌ ಫ್ರೂಟ್‌- 400, ವಿಯಟ್ನಾ ಹಲಸು- 150, ಹುಣಸೆ- 4 ಮರಗಳಿವೆ,

ಇದಲ್ಲದೇ, ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪನ್ನು ಕೂಡ ಬೆಳೆಯುತ್ತಾರೆ. ಹೊಗೆಸೊಪ್ಪನ್ನು ಕಂಪ್ಲಾಪುರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ತೆಂಗನ್ನು ಕೊಬ್ಬರಿ ಮಾಡಿ, ತಿಪಟೂರು ಹಾಗೂ ಚನ್ನರಾಯಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ. ಮಾವು, ಅಡಿಕೆ, ಕಾಫಿಯನ್ನು ಸ್ಥಳೀಯವಾಗಿ ಜಮೀನಿನ ಬಳಿಯೇ ಬಂದು ಖರೀದಿಸುತ್ತಾರೆ. ಮೊದಲು ರೇ,ಷ್ಮೆಯನ್ನು ಕೂಡ ಬೆಳೆಯುತ್ತಿದ್ದರು. ಈಗ ಇಲ್ಲ. ಮುಂದೆ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಉದ್ದೇಶ ಹೊಂದಿದ್ದಾರೆ.

ಸಂಪರ್ಕ ವಿಳಾಸಃ

ಶಿವರಾಂ ಬಿನ್‌ ಲೇಟ್‌ ಹೆಳವೇಗೌಡ

ಗೇರುದಡ,

ಸಾಲಿಗ್ರಾಮ ತಾಲೂಕು

ಮೈಸೂರು ಜಿಲ್ಲೆ

ಮೊ.94488 85885ಕೃಷಿಯನ್ನು ಸರಿಯಾಗಿ ಮಾಡಿದರೆ ಇದಕ್ಕಿಂತ ಲಾಭದಾಯಕ ಹಾಗೂ ನೆಮ್ಮದಿಯಿಂದ ಮತ್ತೊಂದು ಕೆಲಸ ಇಲ್ಲ. ನಾನು ಅಮೆಜಾನ್‌ ಕಾಡಿಗೂ ಭೇಟಿ ನೀಡಿದ್ದೆ. ಆ ದೇಶದ ಜನ ಯಾವ ರೀತಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ ಎಂದು ಕಂಡು ನಾನು ಕೂಡ ಇಲ್ಲಿ ಪ್ರಯೋಗ ಮಾಡುತ್ತಿದ್ದೇನೆ. ನಿವೃತ್ತಿಯ ನಂತರ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ಆರಾಮಾಗಿದ್ದೇನೆ. ಜೊತೆಗೆ ಕೆ.ಆರ್‌.ನಗರ ಹಾಗೂ ಸಾಲಿಗ್ರಾಮ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷನಾಗಿದ್ದು, ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತವಿದೆ.

- ಶಿವರಾಂ, ಗೇರುದಡ

ಕೃಷಿಯಿಂದ ಆದಾಯ ಪಡೆದಿದ್ದು ಸಾಬೀತು ಮಾಡಿದೆ

ನಾನು ಮೂಲತಃ ಕೃಷಿಕ ಕುಟುಂಬದಿಂದ ಬಂದವನು. ಮೊದಲಿನಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಕೃಷಿಯಿಂದ ನನಗೆ ವಾರ್ಷಿಕ 50 ಲಕ್ಷ ರು. ಆದಾಯವಿದೆ ಎಂದು ಹೇಳಿದರೂ ಲೋಕಾಯುಕ್ತ ದಾಳಿ ಮಾಡಿಸಿದ್ದರು. ಕೃಷಿ ಜಮೀನಿನಿಂದ ಯಾವುದೇ ಆದಾಯ ಇಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ನಂತರ ನಾನು ಎಲ್ಲಾ ದಾಖಲೆಗಳನ್ನು ಸಲ್ಲಿಸಿ, 2009 ರವರೆಗೆ 1.42 ಕೋಟಿ ರು. ಆದಾಯ ಬಂದಿದೆ ಎಂಬುದನ್ನು ಸಾಬೀತು ಮಾಡಿದೆ ಎನ್ನುತ್ತಾರೆ ಶಿವರಾಂ.