ತುಮಕೂರು:ಜೈನ ಧರ್ಮದ ಕೊಡುಗೆಗಳು ಇಂದಿನವರೆಗೂ ದಾಖಲೀಕರಣವಾಗಿರುವುದರಿಂದಲೇ ಅದು ಜೀವಂತವಾಗಿ ಉಳಿದುಕೊಂಡಿದೆ. ಇದರ ಮಹತ್ವವು ಮುಂದಿನ ಪೀಳಿಗೆಗೂ ತಲುಪಬೇಕಾದರೆ, ಇದು ಶೈಕ್ಷಣಿಕವಾಗಿ ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಎಚ್.ಪಿ. ನಿತಿನ್ ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೈನ ಅಧ್ಯಯನ ಡಿಪ್ಲೋಮಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ "ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಎಂಬ ವಿಷಯದ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಭಾರತವನ್ನು ಬಿಟ್ಟು ಜೈನ ಧರ್ಮವಿಲ್ಲ, ಜೈನಧರ್ಮವನ್ನು ಬಿಟ್ಟು ಭಾರತವಿಲ್ಲ ಎಂಬಂತೆ ಈ ಧರ್ಮವು ಬೆಳೆದು ಬಂದಿದೆ. ಈ ಸಂದರ್ಭದಲ್ಲಿ ನಾವು ದಿಗಂಬರ, ಶ್ವೇತಾಂಬರ ಎಂದು ಗೆರೆ ಎಳೆದುಕೊಂಡು ಕುಳಿತುಕೊಳ್ಳದೆ, ಮುಕ್ತವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಾಧ್ಯಾಪಕ ಪ್ರೊ. ಶೇಟ್ ಪ್ರಕಾಶ್ ಮಾತನಾಡಿ, ಜೈನ ಧರ್ಮದ ಮೂಲ ಮಂತ್ರವೇ ಅಹಿಂಸೆಯಾಗಿದೆ. ಇದನ್ನು ಅತ್ಯಂತ ಕಠಿಣವಾಗಿ ಪಾಲಿಸುವ ನಿರ್ಧಾರವನ್ನು ಈ ಧರ್ಮ ಒಳಗೊಂಡಿದೆ. ಜೈನ ಧರ್ಮದಿಂದ ನಮ್ಮ ನಾಡಿಗೆ ಹಲವಾರು ಮಹತ್ತರವಾದ ಕೊಡುಗೆಗಳು ಲಭಿಸಿವೆ ಎಂದರು.ಜೈನ ವಿದ್ವಾಂಸರಾದ ಡಾ.ಎಸ್.ಪಿ. ಪದ್ಮಪ್ರಸಾದ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು.