- ಉತ್ತರಾಖಂಡ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಉತ್ತರಾಖಂಡದ ವಿರುದ್ಧ ಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಪಂದ್ಯದಲ್ಲಿ ಕರ್ನಾಟಕವು ದಾವಣಗೆರೆಯ ಬೆಕ್ಕಿನ ಕಣ್ಣಿನ ಹುಡುಗ ಎ.ಎ.ರೋಹಿತ್ ಅವರ ಭರ್ಜರಿ ಶತಕದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ಉತ್ತರಾಖಂಡದ ವಿರುದ್ಧ ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ ಕೇವಲ 37 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬೆನ್ನೆಲುಬಾಗಿ ನಿಂತ ದಾವಣಗೆರೆ ಉದಯೋನ್ಮುಖ ಆಟಗಾರ ಎ.ಎ.ರೋಹಿತ್ ಭರ್ಜರಿ ಶತಕ ಸಿಡಿಸುವ ಮೊದಲ ಇನ್ನಿಂಗ್ಸ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಮೊದಲ ದಿನದ ಅಂತ್ಯಕ್ಕೆ 16 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 2ನೇ ದಿನ ಬ್ಯಾಟಿಂಗ್ ಶುರು ಮಾಡಿದರೂ 37 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 3ನೇ ಕ್ರಮಾಂಕದ ವೈಭವ ಶರ್ಮಾ (45 ರನ್, 107 ಎಸೆತ) ಹಾಗೂ ನಾಯಕ ಮಣಿಕಾಂತ ಶಿವಾನಂದ (24 ರನ್, 45 ಎಸೆತ) ನೆರವಿಗೆ ಬಂದರು. 4ನೇ ವಿಕೆಟ್‌ಗೆ ಈ ಜೋಡಿ 68 ರನ್ ಸೇರಿಸಿದ್ದಾಗಲೇ ವಿಕೆಟ್ ಬಿದ್ದಿತು. ಆಗ ಮೈದಾನಕ್ಕಿಳಿದ ದಾವಣಗೆರೆ ಬೆಕ್ಕಿನ ಕಣ್ಣಿನ ಹುಡುಗ ಎ.ಎ.ರೋಹಿತ್ ಕಡೆವರೆಗೂ ಕ್ರೀಸ್‌ಗೆ ಕಚ್ಚಿಕೊಂಡು, ಸೊಗಸಾಗಿ ಬ್ಯಾಟ್ ಬೀಸಿ, ರನ್ ಹೊಳೆ ಹರಿಸಿದರು. ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಾ 204 ಎಸತೆಗಳನ್ನು ಎದುರಿಸಿ, 101 ರನ್ ಕಲೆ ಹಾಕಿದ ರೋಹಿತ್ ಅಧಿಕಾರಯುತವಾದ 11 ಬೌಂಡರಿ ಬಾರಿಸಿ, ಗಮನ ಸೆಳೆದರು.
ಉತ್ತರಾಖಂಡದ 202 ರನ್‌ಗಳ ಮೊದಲ ಇನ್ನಿಂಗ್ಸ್ ಬೆನ್ನು ಹತ್ತಿದ್ದ ಕರ್ನಾಟಕ ತಂಡ 194 ರನ್ ಗಳಿಸುವುದರಲ್ಲಿ 9 ವಿಕೆಟ್ ಕಳೆದುಕೊಂಡು, ಇನ್ನಿಂಗ್ ಹಿನ್ನೆಡೆ ಅನುಭವಿಸುವ ಅಪಾಯವಿತ್ತು. ಆದರೆ, ಕೊನೆಯ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗಿಳಿದ ಬಿ.ಆರ್.ರತನ್ 17 ಎಸೆತಗಳಲ್ಲಿ ಅಜೇಯ 3 ರನ್ ಬಾರಿಸಿದರು. ಕೊನೆಯ ಬ್ಯಾಟ್ಸ್‌ಮನ್ ರತನ್ ಜೊತೆಗೂಡಿದ ರೋಹಿತ್ 10ನೇ ವಿಕೆಟ್‌ಗೆ 41 ರನ್ ಕಲೆ ಹಾಕಿ, ಕರ್ನಾಟಕ ತಂಡಕ್ಕೆ 33 ರನ್‌ಗಳ ಮಹತ್ವದ ಮುನ್ನಡೆ ದೊರಕಿಸಿಕೊಟ್ಟು, ರನ್ ಔಟಾದರು.ಉತ್ತರಾಖಂಡದ ಪರ ಪ್ರಿಯಾಂಶು ಸಿಂಗ್ 3, ಚೇತನ್ ಸಿಂಗ್, ಆಕಾಶ ಕುಮಾರ, ನಿಶು ಪಟೇಲ್ ತಲಾ 2 ವಿಕೆಟ್ ಪಡೆದರು. ಇನ್ನೂ 2 ದಿನಗಳ ಆಟ ಬಾಕಿ ಇದ್ದು, ಕರ್ನಾಟಕ ತಂಡ ಗೆಲ್ಲುವ ಉತ್ಸಾಹದಿಂದಲೇ ಮಂಗಳವಾರ ಅಂಕಣಕ್ಕಿಳಿಯಲಿದೆ.
- - --17ಕೆಡಿವಿಜಿ15.ಜೆಪಿಜಿ:
ದಾವಣಗೆರೆಯ ಎ.ಎ.ರೋಹಿತ್.