ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅದಿದೇವತೆ ಶ್ರೀಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ವಿಶೇಷ ಪೂಜಾ ವಿಧಿ ವಿಧಾನಗಳು ಆರಂಭವಾದರು. ರಾತ್ರಿ ೨ ಗಂಟೆಗೆ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಹೋಮ-ಹವನಗಳನ್ನು ನಡೆಸಲಾಯಿತು. ನಂತರ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಮುಂಜಾನೆ ೫ರ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬಳಿಕ ಹಲವಾರು ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಪ್ರಸಾದ ವಿತರಿಸಿದರು. ಹಲವಾರು ಭಕ್ತ ಮಂಡಳಿಗಳು ಭಜನೆ, ದೇವರ ಕೀರ್ತನೆಗಳನ್ನು ಹಾಡುತ್ತಿದ್ದುದು ಕಂಡುಬಂತು.ಇಲ್ಲಿನ ಶಂಕರನಗರ ಬಡಾವಣೆಯಲ್ಲಿರುವ ಶ್ರೀಮಹದೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು. ಸಂಜೆ ಪುರಿ ಪರಸೆ ಏರ್ಪಡಿಸಿ ದೇವಳಕ್ಕೆ ಭೇಟಿ ನೀಡಿದ್ದ ಭಕ್ತರಿಗೆ ಪ್ರಸಾದ ರೂಪವಾಗಿ ಪುರಿ ವಿತರಿಸಲಾಯಿತು. ನಾಳೆ ಮಂಗಳವಾರ ಬೆಳಗಿನಿಂದ ಸಂಜೆಯವರೆಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಶಂಕರಪುರ ಬಡಾವಣೆಯ ಶ್ರೀಗಂಗಾಧರೇಶ್ವರ, ಗಾಂಧಿನಗರದ ಶ್ರೀ ಮಹದೇಶ್ವರ, ಹಾಲಹಳ್ಳಿಯ ಶ್ರೀ ಮಹದೇಶ್ವರ, ಕೆರೆಬೀದಿಯ ಶ್ರೀಸಕಲೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಂಗೋಪಸಾಂಗವಾಗಿ ನಡೆಯಿತು.
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಶ್ರೀ ಮೌಕ್ತಿಕೇಶ್ವರ-ನಿಮಿಷಾಂಭ, ಕಾಶಿ ವಿಶ್ವನಾಥೇಶ್ವರ, ಚಂದ್ರವನ ಆಶ್ರಮದಲ್ಲಿರುವ ಚಂದ್ರಮೌಳೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಕೆ.ಆರ್.ಪೇಟೆಯ ಸಾಸಲು ಶಿವನ ದೇವಾಲಯ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.