ಶಿವಮೊಗ್ಗ: ವಾತ್ಸಲ್ಯ ಮರೆತ ಆಧುನಿಕ ಪ್ರಪಂಚದಲ್ಲಿ, ಉತ್ತಮ ವ್ಯಕ್ತಿತ್ವವುಳ್ಳ ವಿದ್ಯಾವಂತ ಸಮೂಹ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಮ್ಮನ್ನು ಸಲುಹಿದ ಸಮಾಜಕ್ಕೆ ನಾವು ಸದಾ ಋಣಿಯಾಗಿರಬೇಕು. ಪ್ರಪಂಚಕ್ಕೆ ತರೆದುಕೊಳ್ಳುವಾಗ ಸಾಮಾಜಿಕ ಜವಾಬ್ದಾರಿ ಎಂಬುದು ಅತಿ ಮುಖ್ಯ. ತಾಯಿ ಇಂದಿನ ಅಗತ್ಯ ನೋಡಿದರೆ, ತಂದೆ ನಾಳೆಯ ಅಗತ್ಯತೆಯನ್ನು ನೋಡುತ್ತಾರೆ. ಓದು ಬರಹ ಕಲಿಸುವುದು ನಿಜವಾದ ವಿದ್ಯಾಭ್ಯಾಸವಲ್ಲ. ಬದಲಿಗೆ ವಿನಯ ವಿಧೇಯತೆ, ಹೃದಯವಂತಿಕೆ ಕಲಿಸುವುದು ನಿಜವಾದ ವಿದ್ಯಾಭ್ಯಾಸ. ಸಂಪಾದನೆ ಎಂದರೆ ಹಣದ ಜೊತೆಗೆ ವಿಶ್ವಾಸ, ಸಂಸ್ಕಾರ, ಸಮಾಜದ ಕಳಕಳಿ ಎಲ್ಲವೂ ಸಂಪಾದನೆಯೆ ಆಗಿದೆ ಎಂದು ಹೇಳಿದರು.
ಮನುಷ್ಯನಲ್ಲಿ ಶ್ರೀಮಂತಿಕೆ ಎಂಬುದು, ಅರ್ಧ ಹಣದ ರೂಪದಲ್ಲಿ ನೀಡಿದರೆ, ಇನ್ನೂ ಅರ್ಧ ಗುಣದ ರೂಪದಲ್ಲಿ ಇರುತ್ತದೆ. ಕಳೆದು ಹೋದ ಸಮಯದ ಬಗ್ಗೆ ಚಿಂತಿಸುವುದಕ್ಕಿಂತ, ಉಳಿದಿರುವ ಸಮಯಕ್ಕೆ ಜೀವ ತುಂಬುವ ಕಾರ್ಯ ನಡೆಯಲಿ. ಮನಸ್ಸುಗಳನ್ನು ಒಡೆಯದಂತಹ ಸ್ನೇಹಿತರನ್ನು ಆರಿಸಿಕೊಳ್ಳಿ. ಕತ್ತಲೆಯು ಭಯ ಮೂಡಿಸಿದರೆ, ಬೆಳಕು ಭರವಸೆ ಮೂಡಿಸುತ್ತದೆ. ಸಮಾಜಕ್ಕೆ ಭರವಸೆ ಮೂಡಿಸುವ ವ್ಯಕ್ತಿತ್ವಗಳು ನೀವಾಗಿ ಎಂದು ಹಾರೈಸಿದರು.18 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಎನ್ಇಎಸ್ ಸಂಸ್ಥೆಯಲ್ಲಿ, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಧ್ಯಯನ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಎನ್ಇಎಸ್ ಸಂಸ್ಥೆ ಸದಾ ಮಾಡುತ್ತಿದೆ ಎಂದು ಹೇಳಿದರು.
ಸವಾಲುಗಳನ್ನು ಎದುರಿಸಲು ಪ್ರೋಗ್ರಾಮಿಂಗ್ ಭಾಷೆ, ಡೇಟಾಬೇಸ್ ನಿರ್ವಹಣೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ನಂತಹ ನಾವೀನ್ಯಯುತ ವಿಷಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ತಂತ್ರಜ್ಞಾನದ ಜತೆಗೆ ಕೌಶಲ್ಯತೆಗಳನ್ನು ಬಳೆಸಿಕೊಳ್ಳಲು ಆದ್ಯತೆ ನೀಡಿ. ಕಲಿಕೆಯ ವಿಚಾರದಲ್ಲಿ ಗೊಂದಲುಗಳು ಬೇಡ. ಯಾವಾಗ ನಮ್ಮ ಆದ್ಯತೆ ಸ್ಪಷ್ಟವಾಗಿರುತ್ತದೆ, ಆಗ ಯಾವುದೇ ದ್ವಂದ್ವಗಳಿರುವುದಿಲ್ಲ ಎಂದರು.
ಇದೇ ವೇಳೆ ಎಂಸಿಎ ವಿಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಮತ್ತು ಸಭಾಂಗಣವನ್ನು ಅತಿಥಿಗಳು ಲೋಕಾರ್ಪಣೆಗೊಳಿಸಿದರು.