ಎಕ್ಸಿಕ್ಯುಟಿವ್ ಹುದ್ದೆಗಳಲ್ಲೇ ನಿರಂತರ ಸೇವೆ ಸಲ್ಲಿಸುವ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿಗಳ ಕಾರ್ಯ ನಿರ್ವಹಣೆಗೆ ಗೃಹ ಇಲಾಖೆ ಬ್ರೇಕ್ ಹಾಕಿದ್ದು, ಈಗ ನೂತನ ‘ಕೂಲಿಂಗ್ ಆಫ್ ಪಿರಿಯಡ್’ ನಿಯಮ ಜಾರಿಗೊಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಕ್ಸಿಕ್ಯುಟಿವ್ ಹುದ್ದೆಗಳಲ್ಲೇ ನಿರಂತರ ಸೇವೆ ಸಲ್ಲಿಸುವ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿಗಳ ಕಾರ್ಯ ನಿರ್ವಹಣೆಗೆ ಗೃಹ ಇಲಾಖೆ ಬ್ರೇಕ್ ಹಾಕಿದ್ದು, ಈಗ ನೂತನ ‘ಕೂಲಿಂಗ್ ಆಫ್ ಪಿರಿಯಡ್’ ನಿಯಮ ಜಾರಿಗೊಳಿಸಿದೆ.
ಎರಡು ವರ್ಷ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಕೆಲಸ ಮಾಡಿದ ಬಳಿಕ ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಕಡ್ಡಾಯವಾಗಿ ಸಿವಿಲ್ ವಿಭಾಗದ ಇನ್ಸ್‌ಪೆಕ್ಟರ್‌ಗಳಿಗೆ ಒಂದು ವರ್ಷ ಹಾಗೂ ಡಿವೈಎಸ್ಪಿ-ಎಸಿಪಿಗಳಿಗೆ ಎರಡು ವರ್ಷ ಸೇವೆ ಸಲ್ಲಿಸುವಂತೆ ಗೃಹ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಇದು ಇಲಾಖೆಯಲ್ಲಿ ಭಾರೀ ಸಂಚಲನಕ್ಕೂ ಕಾರಣವಾಗಿದೆ.
ನಾನ್ ಎಕ್ಸಿಕ್ಯುಟಿವ್ ಸೇವೆ ಪೂರ್ಣಗೊಳಿಸಿದ ನಂತರ ಮಾತ್ರ ಆ ಅಧಿಕಾರಿಗಳು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನಿಯೋಜಿಸಲು ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಒಳಾಡಳಿತ) ರಾಜೇಂದ್ರ ಕುಮಾರ್ ಕಟಾರಿಯಾ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ನಿಯಮ ಪ್ರಸುತ್ತ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅನ್ವಯವಾಗಲಿದೆ ಎಂದಿದ್ದಾರೆ.
ರೈಲ್ವೆ, ಸೈಬರ್, ಮಹಿಳಾ ಠಾಣೆ ಎಕ್ಸಿಕ್ಯುಟಿವ್:
ಈವರೆಗೆ ಕಮಿಷನರೆಟ್ ಸರಹದ್ದಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಹಾಗೂ ಸಿಸಿಬಿ ವಿಭಾಗಗಳನ್ನು ಮಾತ್ರ ಎಕ್ಸಿಕ್ಯುಟಿವ್ ಹುದ್ದೆಗಳೆಂದು ಇಲಾಖೆ ಪರಿಗಣಿಸಿತ್ತು. ಅಲ್ಲದೆ, ಕಮಿಷನರೆಟ್ ವ್ಯಾಪ್ತಿಯಲ್ಲಿ ಪಿಐ-ಡಿವೈಎಸ್ಪಿ ದರ್ಜೆ ಅಧಿಕಾರಿಗಳಿಗೆ ಗರಿಷ್ಠ 5 ವರ್ಷಗಳ ಸೇವಾವಧಿ ನಿಗದಿಪಡಿಸಲಾಗಿತ್ತು. ಈಗ ರೈಲ್ವೆ, ಸೈಬರ್ ಹಾಗೂ ಮಹಿಳಾ ಠಾಣೆಗಳನ್ನು ಕೂಡ ಎಕ್ಸಿಕ್ಯುಟಿವ್ ಹುದ್ದೆಗಳೆಂದು ಪರಿಗಣಿಸಲಾಗಿದ್ದು, ಪ್ರಸುತ್ತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಪೂರ್ಣಗೊಳಿಸಿದ ಬಳಿಕ ಆ ಹುದ್ದೆಗಳಿಗೂ ಕೂಲಿಂಗ್ ಆಫ್ ಪಿರಿಯಡ್ ನಿಬಂಧನೆ ಅನ್ವಯವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ನಿಗದಿ ಕಾರ್ಯಕಾರಿಯೇತರ ಹುದ್ದೆ ವರ್ಗಾವಣೆ ಬಗ್ಗೆ ಹೊಸ ಮಾರ್ಗಸೂಚಿ ಕುರಿತು ‘ಕನ್ನಡಪ್ರಭ’ ಜು.28ರಂದು ವಿಶೇಷ ವರದಿ ಪ್ರಕಟಿಸಿತ್ತು.
ಹೊಸ ಮಾರ್ಗ ಸೂಚಿ ಹೀಗಿದೆ
ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಮುಂಬಡ್ತಿ ಪಡೆದ ಬಳಿಕ ಕಡ್ಡಾಯವಾಗಿ ಎರಡು ವರ್ಷಗಳು ಕಾರ್ಯಕಾರಿಯೇತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು.
- ಬೆಂಗಳೂರು, ಮೈಸೂರು, ಕಲುಬುರಗಿ, ಬೆಳಗಾವಿ, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ (ಸಿಸಿಬಿ, ಕಾನೂನು ಮತ್ತು ಸುವ್ಯವಸ್ಥೆ, ರೈಲ್ವೆ, ಸಂಚಾರ ಹಾಗೂ ಮಹಿಳಾ ಠಾಣೆಗಳು)ಲ್ಲಿ ಪಿಐ ಹಾಗೂ ಎಸಿಪಿಗಳಿಗೆ 5 ವರ್ಷ ಗರಿಷ್ಠ ಸೇವಾವಧಿ ನಿಗದಿಪಡಿಸಲಾಗಿದೆ. ಈ ಅವಧಿ ಮುಗಿದ ಬಳಿಕ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ನಂತರವಷ್ಟೇ ಕಮಿಷನರೆಟ್ ವ್ಯಾಪ್ತಿಗೆ ವರ್ಗಾವಣೆಗೆ ಅರ್ಹರಾಗುತ್ತಾರೆ.
- ಕೂಲಿಂಗ್ ಆಫ್ ಪಿರಿಯಡ್ ಅವಧಿ ಪೂರ್ಣಗೊಳ್ಳುವ ಮುನ್ನ ಕಮಿಷನರೆಟ್ ವ್ಯಾಪ್ತಿಯ ಹೊರಗಿನ ಘಟಕಗಳಲ್ಲಿ ನಿರ್ವಹಿಸಿದ ಸೇವೆ ಹಾಗೂ ಕಮಿಷನರೆಟ್ ಸರಹದ್ದಿನಲ್ಲಿ ಕಾರ್ಯಕಾರಿಯೇತರ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಯಾವುದೇ ಕಾರಣಕ್ಕೂ ಕೂಲಿಂಗ್ ಆಫ್ ಪಿರಿಯಡ್ ಅವಧಿ ಎಂದು ಪರಿಗಣಿಸುವುದಿಲ್ಲ ಅಥವಾ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
- ಮುಂಬಡ್ತಿ ನಂತರ ಪಿಐ ಹಾಗೂ ಡಿವೈಎಸ್ಪಿಗಳು ಕಡ್ಡಾಯವಾಗಿ ನಾಲ್ಕು ವಾರಗಳ ಪುನರ್ ಮನನ ತರಬೇತಿ ಪೂರ್ಣಗೊಳಿಸಬೇಕು. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ಅಧಿಕಾರಿಯನ್ನು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಪರಿಗಣಿಸುವುದಿಲ್ಲ.
- ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣ, ಅಪರಾಧ ಪ್ರಕರಣದ ತನಿಖೆ ಅಥವಾ ವಿಚಾರಣೆ ಹಾಗೂ ಕಾರ್ಯಕಾರಿ ಹುದ್ದೆಗಳಿಗೆ ಪೊಲೀಸ್ ಸಿಬ್ಬಂದಿ ಮಂಡಳಿಯು ಅನರ್ಹರೆಂದು ಪರಿಗಣಿಸುವ ಅಧಿಕಾರಿಗಳು ಕಾರ್ಯಕಾರಿ ಹುದ್ದೆಗಳಿಗೆ ವರ್ಗಾವಣೆಗೆ ಅನರ್ಹರು
- ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸುವ ಡಿವೈಎಸ್ಪಿ ಹಾಗೂ ಪಿಐಗಳಿಗೆ ಕಾರ್ಯಕಾರಿಯೇತರ ಸೇವೆ ಕಡ್ಡಾಯಗೊಳಿಸಲಾಗಿದೆ. ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಪಿಐಗಳು ಒಂದು ವರ್ಷ ಹಾಗೂ ಡಿವೈಎಸ್ಪಿಗಳು ಎರಡು ವರ್ಷ ಕೆಲಸ ಮಾಡಬೇಕು. ಈ ಅವಧಿ ಪೂರ್ಣಗೊಳಿಸಿದ ನಂತರವಷ್ಟೇ ಎಕ್ಸಿಕ್ಯುಟಿವ್ ಸ್ಥಾನಗಳಿಗೆ ಅರ್ಹರಾಗುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.