ಬ್ಯಾಡಗಿ: ಸಾಧನೆಯ ಹೊಸ್ತಿಲಿನಲ್ಲಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಬಿಆರ್‌ಈ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಆರ್. ಬಳ್ಳಾರಿ ಭರವಸೆ ನೀಡಿದರು.
ಶೈಕ್ಷಣಿಕ ಹಂತದಲ್ಲಿ ಉತ್ತಮ ಸಾಧನೆ ತೋರುವುದೆಂದರೆ ಸುಲಭದ ಮಾತಲ್ಲ, ತಪ್ಪಸ್ಸು ಮಾಡಿದಷ್ಟೇ ಗಟ್ಟಿಯಾಗಿ ಕುಳಿತು ಜ್ಞಾನಾರ್ಜನೆ ಪಡೆದುಕೊಂಡು ಬಳಿಕ ನಿರ್ಣಾಯಕ ಹಂತದಲ್ಲಿ ಅದನ್ನು ಪ್ರಚುರಪಡಿಸಬೇಕಾಗುತ್ತದೆ ಎಂದರು.
ದೃಢ ನಿರ್ಧಾರಗಳು ಬೇಕು: ಪ್ರಶಿಕ್ಷಣಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಬಿಎಸ್ಎಂ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ, ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವವಿದೆ, ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ ನಮ್ಮನ್ನು ಪ್ರಶ್ನಿಸುವವರು ಹಾಗೂ ಅನುಕರಣೆ ಮಾಡುವವರು ಕೂಡ ಇದ್ದಾರೆ, ಈ ಹಿನ್ನೆಲೆಯಲ್ಲಿ ಇಂದಿನ ಪ್ರಶಿಕ್ಷಣಾರ್ಥಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ದೃಡ ನಿರ್ಧಾರಗಳು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ನಿಮ್ಮನ್ನು ನೀವು ತೊಡಗಿಸಿಕೊಂಡು ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಸುರೇಶ ಮಾತನಾಡಿ, ಬಿ.ಇಡಿ. ವ್ಯಾಸಂಗದಲ್ಲಿ 2400 ಅಂಕಗಳಿಗೆ 2226 (92.75) ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಹಾವೇರಿ ವಿಶ್ವವಿದ್ಯಾಲಯದಿಂದ ಕೊಡ ಮಾಡುವ 8ನೇ ರ್‍ಯಾಂಕ್ ಪಡೆದ ಸ್ನೇಹ ಶಿವಪ್ಪ ಇಮ್ಮಡಿ ಹಾಗೂ 2400 ಅಂಕಗಳಿಗೆ 2205 (91.88) ಅಂಕಗಳನ್ನು ಪಡೆದ ನಾಗರಾಜ ವಾಸ್ತಣ್ಣನವರ ಇವರನ್ನು ಸನ್ಮಾನಿಸಲು ಅತ್ಯಂತ ಖುಷಿಯಾಗುತ್ತಿದೆ ಎಂದರು.