ಕನ್ನಡಪ್ರಭ ವಾರ್ತೆ ಹನೂರು
ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅನ್ಯ ವ್ಯಕ್ತಿಗಳ ಖಾತೆಗೆ ಲಕ್ಷಾಂತರ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ (ರಿ), ಸಮೂಹ ಹಾಲು ಶೀಥಲೀಕರಣ ಕೇಂದ್ರ ಮುಂಭಾಗ ಹಾಲು ಉತ್ಪಾದಕರು ಹಾಗೂ ಭಾರತ ಕಿಸಾನ್ ಸಂಘ ವತಿಯಿಂದ ಧಿಡೀರ್ ಪ್ರತಿಭಟನೆ ಜರುಗಿತು. ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅನ್ಯ ವ್ಯಕ್ತಿಗಳ ಖಾತೆಗೆ ಲಕ್ಷಾಂತರ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಹೀಗಾಗಿ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಚಾಮುಲ್ ನಿರ್ದೇಶಕರಾದ ಶಾಹುಲ್ ಅಹಮ್ಮದ್ ಹಾಗೂ ಉದ್ದನೂರು ಮಹದೇವಸ್ವಾಮಿ ಮಾತನಾಡಿ, ಯಾವುದೇ ಸಹಕಾರ ಸಂಘಗಳು ನಡೆಯಬೇಕಾದರೆ ಅದಕ್ಕೆ ಸದಸ್ಯರೇ ಜೀವಾಳ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಲು ಬಿಡುವುದಿಲ್ಲ, ರೈತರಿಗೆ ಮೋಸ ಮಾಡಿ ಅನ್ಯ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಸೂಕ್ತ ತನಿಖೆ ಮಾಡಿಸಲಾಗುವುದು. ಅಕ್ರಮ ಸಾಬೀತಾದರೆ ಕಾನೂನು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.ಪ್ರತಿಭಟನೆಯಲ್ಲಿ ಭಾರತ್ ಕಿಸಾನ್ ಸಂಘದ ಮುಖಂಡರಾದ ಡಾನ್ ಬೊಸ್ಕೊ, ಮಲ್ಲಿಕಾರ್ಜುನ, ಮಣಿಗಾರ ಪ್ರಸಾದ್ ಹಾಗೂ ತೋಮಿಯರ್ ಪಾಳ್ಯ ಹಾಲು ಉತ್ಪಾದಕರು ಚಾರ್ಲೆಸ್, ಸಾಗಯರಾಜ್, ಜ್ಞಾನ ಪ್ರಕಾಶ್, ಚಾರ್ಲೆಸ್, ಜಾನ್, ಪತ್ತಿನಾಧನ್, ಮಂಗಳ, ಚಾರ್ಲ್ಸ್ ಸೇರಿದಂತೆ ಮಹಿಳೆಯರು ಒಳಗೊಂಡು ನೂರಾರು ಹಾಲು ಉತ್ಪಾದಕರು ಪಾಲ್ಗೊಂಡಿದ್ದರು.