ನಿವೃತ್ತ ಪೊಲೀಸ್‌ ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸಲು ಸಹಕಾರ-ಟಿ. ಸುಂದರರಾಜ್

KannadaprabhaNewsNetwork | Published : Apr 3, 2024 1:33 AM

ಸಾರಾಂಶ

ಪೊಲೀಸ್ ಕಾರ್ಯ ಅತ್ಯಂತ ಶ್ರೇಷ್ಠವಾಗಿದ್ದು ನಿಷ್ಠೆಯಿಂದ ದುಡಿದ ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಸರ್ಕಾರದ ಸೌಲಭ್ಯ ಸಿಗಬೇಕು, ಆ ನಿಟ್ಟಿನಲ್ಲಿ ನಾವು ನಿಮ್ಮೊಂದಿಗೆ ನಿಂತು ಸಹಕಾರ ಮಾಡುತ್ತೇವೆ ಎಂದು ಗಂಗೆಬಾವಿ ೧೦ನೇ ಮೀಸಲು ಪೊಲೀಸ್ ಪಡೆಯ ಕಮಾಡೆಂಟ್ ಟಿ. ಸುಂದರ್‌ರಾಜ್ ಹೇಳಿದರು.

ಶಿಗ್ಗಾವಿ: ಕರ್ತವ್ಯದ ಅವಧಿಯಲ್ಲಿ ಸಾಧನೆಗೈದ ನಿವೃತ್ತ ಅಧಿಕಾರಿ ಸಿಬ್ಬಂದಿಯ ನೆನಸಿಕೊಳ್ಳುವದು ಅವರನ್ನು ಪ್ರೋತ್ಸಾಹಿಸುವ ಸನ್ಮಾನಿಸುವ ದಿವಸವೇ ಪೊಲೀಸ್ ಧ್ವಜ ದಿನಾಚರಣೆಯಾಗಿದೆ. ಪೊಲೀಸ್ ಕಾರ್ಯ ಅತ್ಯಂತ ಶ್ರೇಷ್ಠವಾಗಿದ್ದು ನಿಷ್ಠೆಯಿಂದ ದುಡಿದ ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಸರ್ಕಾರದ ಸೌಲಭ್ಯ ಸಿಗಬೇಕು, ಆ ನಿಟ್ಟಿನಲ್ಲಿ ನಾವು ನಿಮ್ಮೊಂದಿಗೆ ನಿಂತು ಸಹಕಾರ ಮಾಡುತ್ತೇವೆ ಎಂದು ಗಂಗೆಬಾವಿ ೧೦ನೇ ಮೀಸಲು ಪೊಲೀಸ್ ಪಡೆಯ ಕಮಾಡೆಂಟ್ ಟಿ. ಸುಂದರ್‌ರಾಜ್ ಹೇಳಿದರು.

ತಾಲೂಕಿನ ಗಂಗೆಬಾವಿಯ ೧೦ನೇ ಕೆಎಸ್‌ಆರ್‌ಪಿ ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳಾದ ವೈದ್ಯಕೀಯ ಸೇವಾ ವೆಚ್ಚ ಮರಳಿ ಸಿಗುವ ಯೋಜನೆಗೆ ಅರ್ಜಿ ಸಲ್ಲಿಸಿ, ದುರಾದೃಷ್ಟವಶಾತ್ ಸಾವು ಸಂಭವಿಸಿರುವ ಸಂದರ್ಭದಲ್ಲಿ ನಿವೃತ್ತ ಸಿಬ್ಬಂದಿಗಳ ಕುಟುಂಬ ಸದಸ್ಯರು ಯಾರು ಸಹ ಧೈರ್ಯ ಕಳೆದುಕೊಳ್ಳದೆ ಸರ್ಕಾರದಿಂದ ನಿಮಗೆ ಇರುವ ಸೌಲಭ್ಯ ಪಡೆಕೊಳ್ಳಿ ಹಾಗೂ ನಿವೃತ್ತ ಸಿಬ್ಬಂದಿಗಳು ಏನೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಿಕೊಳ್ಳಿ ಎಂದರು.

ರಾಜ್ಯದಲ್ಲಿ ಸುಮಾರು ೩೦-೩೭ ವರ್ಷಗಳ ಕಾಲ ನಮ್ಮೊಂದಿಗೆ ಕಾರ್ಯನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ಅಧಿಕಾರಿಗಳನ್ನು ಸನ್ಮಾನಿಸುತ್ತಿದ್ದೇವೆ. ಅವರು ನಮ್ಮ ನಡುವೆ ಇದ್ದು, ಸತತವಾಗಿ ಕಾರ್ಯನಿರ್ವಹಿಸಿ ಸದಾ ಕಾಲ ಕೈಜೋಡಿಸಿ ಯಶಸ್ಸು ಕಾಣಲು ಕಾರಣೀಕರ್ತರಾಗಿದ್ದಾರೆ. ಅವರ ಆದರ್ಶವನ್ನು ನಮ್ಮೊಂದಿಗೆ ಇಟ್ಟುಕೊಂಡು ಮುಂದೆ ನಡೆಯಬೇಕು, ನೀವು ನಿವೃತ್ತಿ ಹೊಂದಿದ್ದರೂ ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಕೆ.ಎಸ್.ಐ ಬಿ.ಸಿ.ಸನ್ಮೂಖಮಠ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ನಮ್ಮ ಪೊಲೀಸ್ ಇಲಾಖೆಯಲ್ಲಿ ಸುಖವು ಕಡಿಮೆ ಆದರೆ ಕಷ್ಟಪಟ್ಟು ಯಾವುದೇ ಕರ್ತವ್ಯವವನ್ನು ಹಿರಿಯ ಅಧಿಕಾರಿಗಳು ನೀಡಿದರೆ ಅದನ್ನು ಚಾಚು ತಪ್ಪದೆ ಕಾರ್ಯನಿರ್ವಹಿಸಬೇಕು, ಹಿರಿಯ ಅಧಿಕಾರಿಗಳಿಗೆ ಎಂದಿಗೂ ಕೃತಜ್ಞಾಭಾವವನ್ನು ತೋರಿದಾಗ ನಮ್ಮೊಂದಿಗೆ ಸ್ಪಂದಿಸುತ್ತಾರೆ ನಾನು ಅಂತಾ ಎಂದೆಂದಿಗೂ ಅನ್ನದೆ ಇರುವದು ಬಿಟ್ಟುಬಿಡಿ ಸೇವೆ ಮಾಡುವಾಗ ಉನ್ನತ ಅಧಿಕಾರಿಗಳೊಂದಿಗೆ ಸ್ಪಂದಿಸುವದು ಅವಶ್ಯವಾಗಿದೆ. ನಾವು ಸೇವೆಯಲ್ಲಿ ಇರುವ ಗೌರವವು ನಿವೃತ್ತರಾದ ಮೇಲೆ ಸಿಗದು. ಆದ್ದರಿಂದ ಸೇವೆಯಲ್ಲಿದ್ದಾಗಲೆ ಗೌರವ ಹೆಚ್ಚಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸ್ವಾಗತವನ್ನು ಸಹಾಯಕ ಕಮಾಡೆಂಟ್ ದಾವಲಸಾಬ್ ಯಲಿಗಾರ ನೆರವೇರಿಸಿದರು.

ರಾಯಾಪೂರ ಘಟಕದ ಸಹಾಯಕ ಕಮಾಂಡೆಂಟ್ ವಿಶ್ವನಾಥ ನಾಯಕ್, ಸಹಾಯಕ ಕಮಾಂಡೆಂಟ್ ಸುಲೇಮಾನ ಹಂಚಿನಮನಿ, ನಿವೃತ್ತ ಸಿಬ್ಬಂದಿ ಆರ್,ಎಫ್ ಬೆಟಗೇರಿ, ಎ.ಕೆ. ಮಿರೇಣ್ಣವರ, ಟಿ.ವ್ಹಿ. ಮರಕಟ್ಟಿ, ಎನ್.ಎಸ್. ಪ್ರೋಪಸನ್‌ಮಠ, ಬಿ.ಸಿ. ಸನ್ಮೂಖಮಠ, ಎಂ.ಎಂ.ಕಾಂಚಪ್ಪನವರ, ಇ.ಡಿ. ಬಡಿಗೇರ, ಕೆ.ಕೆ. ಗುಂಡಪ್ಪನವರ, ಇಸೂಪ ಜಾಕೋಪ್ ಸೇರಿದಂತೆ ಅಧಿಕಾರಿ ಸಿಬ್ಬಂದಿ ಇದ್ದರು.

ಕೆಎಸ್‌ಆರ್‌ಪಿ ಅಧಿಕಾರಿಗಳಾದ ವಸ್ತ್ರದ ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆಯನ್ನು ಆರ್‌ಪಿಐ ರಾಜಶೇಖರ ಪಾಟೀಲ ನೆರವೇರಿಸಿದರು.

ಕವಾತ್‌ನಲ್ಲಿ ೮ ತಂಡಗಳು ಪಾಲ್ಗೊಂಡಿದ್ದು, ಆರ್‌ಎಸ್‌ಐ, ಎಆರ್‌ಎಸ್‌ಐ ದರ್ಜೆಗಳ ಅಧಿಕಾರಿಗಳು ತಂಡದ ನಾಯಕರಾಗಿದ್ದರು.

Share this article