ಇಂದಿನಿಂದ ಸಹಕಾರ ಸಪ್ತಾಹ

KannadaprabhaNewsNetwork |  
Published : Nov 14, 2026, 02:15 AM IST
ಫೋಟೋ : ೧೩ಕೆಎಂಟಿ_ಎನ್‌ಒವಿ_ಕೆಪಿ೧ : ಸುದ್ದಿಗೋಷ್ಠಿಯಲ್ಲಿ ವಿಎನ್.ಭಟ್ ಅಳ್ಳಂಕಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ | Kannada Prabha

ಸಾರಾಂಶ

ರೈತರನ್ನು, ಶೋಷಿತರನ್ನು ರಕ್ಷಿಸುವ ಕಾರ್ಯವನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಸಹಕಾರಿ ಕ್ಷೇತ್ರದ ಬಲವರ್ಧನೆ ಹಾಗೂ ಜನಜಾಗೃತಿಗಾಗಿ ಸಹಕಾರ ಸಪ್ತಾಹವನ್ನು ಮಹಾಮಂಡಳದ ಸೂಚನೆಯಂತೆ ಆಚರಿಸುತ್ತಿದ್ದೇವೆ.

ಕುಮಟಾ: ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ ಹಾಗೂ ಕೌಶಲ್ಯಾಧಾರಿತ ವೃತ್ತಿಪರ ಸೇವೆಯ ಧ್ಯೇಯದೊಂದಿಗೆ ರಾಜ್ಯ ಸಹಕಾರ ಮಹಾಮಂಡಳ, ಕೆಡಿಸಿಸಿ ಬ್ಯಾಂಕ್, ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ಹಾಗೂ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಆಶ್ರಯದಲ್ಲಿ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ. ೧೪ರಿಂದ ೨೦ರ ವರೆಗೆ ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಹಕಾರ ಯುನಿಯನ್ ಜಿಲ್ಲಾಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ರೈತರನ್ನು, ಶೋಷಿತರನ್ನು ರಕ್ಷಿಸುವ ಕಾರ್ಯವನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಸಹಕಾರಿ ಕ್ಷೇತ್ರದ ಬಲವರ್ಧನೆ ಹಾಗೂ ಜನಜಾಗೃತಿಗಾಗಿ ಸಹಕಾರ ಸಪ್ತಾಹವನ್ನು ಮಹಾಮಂಡಳದ ಸೂಚನೆಯಂತೆ ಆಚರಿಸುತ್ತಿದ್ದೇವೆ. ಸಪ್ತಾಹವನ್ನು ಕುಮಟಾ ಕೆಡಿಸಿಸಿ ಬ್ಯಾಂಕ್ ಶಾಖೆಯ ಸಭಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರದ ಕುರಿತು ಯುನಿಯನ್ ಮಾಜಿ ನಿರ್ದೇಶಕ ಸೀತಾರಾಮ ವಿ. ಹೆಗಡೆ ಉಪನ್ಯಾಸ ಮಾಡಲಿದ್ದಾರೆ ಎಂದರು.

ನ. ೧೫ರಂದು ಶಿರಸಿ ತಟ್ಟೀಸರದ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿಯಲ್ಲಿ, ನ. ೧೬ರಂದು ಹಳಿಯಾಳದ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳಿಂದ ನ. ೧೭ರಂದು ಯಲ್ಲಾಪುರ ಕಳಚೆಯ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿಯಲ್ಲಿ, ಅಂಕೋಲಾ ಹಾಗೂ ಕಾರವಾರ ತಾಲೂಕುಗಳಿಂದ ನ. ೧೮ರಂದು ಅಂಕೋಲಾದ ಹಿಲ್ಲೂರಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿಯಲ್ಲಿ, ಹೊನ್ನಾವರ ಭಟ್ಕಳ ತಾಲೂಕುಗಳಿಂದ ನ. ೧೯ರಂದು ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ಹಾಗೂ ನ. ೨೦ರಂದು ಸಿದ್ದಾಪುರದ ಬಾಳೇಸರ ಮಲ್ಲಿಕಾರ್ಜುನ ವ್ಯ.ಸೇ. ಸಹಕಾರಿಯಲ್ಲಿ ಸಪ್ತಾಹದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಪ್ತಾಹದಲ್ಲಿ ಜಿಲ್ಲೆಯ ಉತ್ತಮ ಸಹಕಾರಿ ಸಂಘ, ಸಹಕಾರಿಗಳು ಹಾಗೂ ನೌಕರರಿಗೆ ಗೌರವಿಸಲಾಗುವುದು. ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ಸಹಕಾರಿ ಕ್ಷೇತ್ರದ ಜಾಗೃತಿಗಾಗಿ ಭಾಷಣ ಹಾಗೂ ಚರ್ಚೆ ಸ್ಪರ್ಧೆಗಳನ್ನು ನಡೆಸಿ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಸುಮಾರು ೧೨೨ ವರ್ಷಗಳ ಇತಿಹಾಸದೊಂದಿಗೆ ದೇಶದಲ್ಲಿಂದು ಸಹಕಾರಿ ಕ್ಷೇತ್ರ ಅತ್ಯಂತ ಬೃಹದಾಕಾರವಾಗಿ ಬೆಳೆದಿದೆ ಎಂದು ವಿ.ಎನ್. ಭಟ್ಟ ಅಳ್ಳಂಕಿ ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ