ಮಾನವ ಕಳ್ಳಸಾಗಾಣಿಕೆ ತಡೆಗೆ ಇಲಾಖೆಗಳ ಸಮನ್ವಯ ಅಗತ್ಯ: ಸಿ.ಎಸ್. ಶಿವನಗೌಡ್ರ

KannadaprabhaNewsNetwork |  
Published : Aug 05, 2026, 02:15 AM IST
ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಹಾಗೂ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಚಾಲನೆ ನೀಡಿದರು. | Kannada Prabha

ಸಾರಾಂಶ

ನಿಯಮಾನುಸಾರ ಕೆಲಸಕ್ಕೆ ತಕ್ಕ ಸೂಕ್ತ ವೇತನ ನೀಡದಿರುವುದು ಸಹ ಜೀತ ಪದ್ಧತಿಯ ಒಂದು ರೂಪವೇ ಆಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ.

ಗದಗ: ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಇವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲೆಯ ಎಲ್ಲ ಇಲಾಖೆಗಳು ಒಂದಾಗಿ ಶ್ರಮಿಸುವುದು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉದಯೋನ್ಮುಖ ಸ್ವಯಂಸೇವಾ ಸಂಸ್ಥೆ ರಾಮನಗರ ಇವುಗಳ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಪದ್ಧತಿ ಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಯಮಾನುಸಾರ ಕೆಲಸಕ್ಕೆ ತಕ್ಕ ಸೂಕ್ತ ವೇತನ ನೀಡದಿರುವುದು ಸಹ ಜೀತ ಪದ್ಧತಿಯ ಒಂದು ರೂಪವೇ ಆಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯುವುದು. ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣದ ಹಕ್ಕು ತಲುಪಿಸಿದರೆ ಈ ಪಿಡುಗನ್ನು ಆರಂಭದಲ್ಲೇ ತಡೆಯಬಹುದು.

ಜೀತ ಪದ್ಧತಿ ಮತ್ತು ಮಾನವ ಕಳ್ಳ ಸಾಗಾಣಿಕೆಯಂತಹ ಕೃತ್ಯಗಳು ಹೆಚ್ಚಾಗಿ ನಾಲ್ಕು ಗೋಡೆಗಳ ಮಧ್ಯೆ(ರಹಸ್ಯವಾಗಿ) ನಡೆಯುತ್ತವೆ. ಇವುಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಕಾರ ಅಗತ್ಯ. ಸಂತ್ರಸ್ತರನ್ನು ಮುಕ್ತಗೊಳಿಸುವುದಷ್ಟೇ ಅಲ್ಲದೇ, ಅವರಿಗೆ ಸೂಕ್ತ ಬಿಡುಗಡೆ ಪತ್ರ, ಆರ್ಥಿಕ ನೆರವು, ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸಿ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಈ ಮೊದಲು ಜೀತ ಪದ್ಧತಿಯ ಪ್ರಕರಣಗಳು ಕಂಡುಬಂದಿರಲಿಲ್ಲ. ಇತ್ತೀಚೆಗೆ ಬಂದಿದ್ದ ಒಂದು ದೂರಿನ ಮೇರೆಗೆ ಪರಿಶೀಲಿಸಿದಾಗ ಅದು ಬಾದಾಮಿಗೆ ಸಂಬಂಧಪಟ್ಟಿರುವುದು ಎಂದು ತಿಳಿದು ಬಂತು. ತಕ್ಷಣವೇ ಬಾದಾಮಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಸಂತ್ರಸ್ತರನ್ನು ಬಿಡುಗಡೆಗೊಳಿಸಿ ಅವರಿಗೆ ಸೂಕ್ತ ನೆರವು ಒದಗಿಸಲಾಗಿದೆ ಎಂದರು.

ಉದಯೋನ್ಮುಖ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ವೈ. ಪಕ್ಕಣ್ಣ ಬೆಳೇರಿ ಮಾತನಾಡಿ, ನಾವು ಅನುಭವಿಸಿದ ಕಷ್ಟ ಹಾಗೂ ನೋವುಗಳು ಇನ್ನೊಬ್ಬರಿಗೆ ಬರಬಾರದು ಎಂಬ ಉದ್ದೇಶದಿಂದ ಯಾರೂ ತಿಳಿವಳಿಕೆ ಇಲ್ಲದೆ ಊರು ಬಿಟ್ಟು ಹೋಗಿ ಜೀತ ಪದ್ಧತಿಯಂಥ ಸಂಕಷ್ಟಕ್ಕೆ ಸಿಲುಕದಂತೆ ತಡೆಯಲು ವ್ಯಾಪಕ ಮನವರಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಸಿದರು.

ಈ ವೇಳೆ ಮಾನವ ಕಳ್ಳಸಾಗಾಣಕೆ ಹಾಗೂ ಜೀತ ಪದ್ದತಿಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಪದ್ಧತಿ ಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮ ಕುರಿತು ಜಿ ಸ್ಕ್ಯಾಂಡ್ ತಂಡದವರಿಂದ ಕಿರು ನಾಟಕ ಪ್ರದರ್ಶನ ನಡೆಯಿತು.

ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಪ್ರೇಮಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್.ಎಸ್. ನೀಲಗುಂದ, ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಸಂದೀಪ್ ಪಾಟೀಲ, ವೇಣುಗೋಪಾಲ, ಚಿತ್ರಾ ವಿ. ಸೇರಿದಂತೆ ಉದಯೋನ್ಮುಖ ಸ್ವಯಂ ಸೇವಾ ಸಂಸ್ಥೆ ಸಿಬ್ಬಂದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡುಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿಗಾಗಿ ಪ್ರತಿಭಟನೆ