ಪ್ರಾಥಮಿಕ ಹಂತದಿಂದಲೇ ನಕಲು ಮುಕ್ತ ಪರೀಕ್ಷೆ

KannadaprabhaNewsNetwork |  
Published : May 12, 2024, 01:24 AM IST
ಪರೀಕ್ಷೆ | Kannada Prabha

ಸಾರಾಂಶ

ವೆಬ್ ಕಾಸ್ಟಿಂಗ್ ಪದ್ಧತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದರಿಂದ ಫಲಿತಾಂಶ ಪಾತಳಕ್ಕೆ ಕುಸಿದಾಗ ಗ್ರೇಸ್ ಮಾರ್ಕ್ ಕೊಟ್ಟು ಫಲಿತಾಂಶ ಸುಧಾರಣೆ ಮಾಡಿರುವ ಪ್ರೌಢ ಶಿಕ್ಷಣ ಇಲಾಖೆ ಈಗ ಪ್ರಾಥಮಿಕ ಹಂತದಿಂದಲೇ ನಕಲು ಮುಕ್ತ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ವೆಬ್ ಕಾಸ್ಟಿಂಗ್ ಪದ್ಧತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದರಿಂದ ಫಲಿತಾಂಶ ಪಾತಳಕ್ಕೆ ಕುಸಿದಾಗ ಗ್ರೇಸ್ ಮಾರ್ಕ್ ಕೊಟ್ಟು ಫಲಿತಾಂಶ ಸುಧಾರಣೆ ಮಾಡಿರುವ ಪ್ರೌಢ ಶಿಕ್ಷಣ ಇಲಾಖೆ ಈಗ ಪ್ರಾಥಮಿಕ ಹಂತದಿಂದಲೇ ನಕಲು ಮುಕ್ತ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.

ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ, ನಕಲು ಮುಕ್ತವಾಗಿ ನಡೆಸಿದ್ದರಿಂದ ಫಲಿತಾಂಶ ಕುಸಿತ ಕಂಡಿದೆ ಎಂದು ವಿಶ್ಲೇಷಿಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ನಕಲು ಮಾಡಿಯೇ ಪಾಸಾಗಬಹುದು ಎಂದು ನಂಬಿದ್ದವರಿಗೂ ಇದು ತಡೆಯಾಗಿದೆ. 1991-92 ರಲ್ಲಿ ಅಗಿನ ಶಿಕ್ಷಣ ಆಯುಕ್ತ ಮದನಗೋಪಾಲ ಅವರು ಸುಧಾರಣೆಗೆ ಹಲವು ಕ್ರಮ ಕೈಗೊಂಡಿದ್ದರು. ಪರೀಕ್ಷಾ ಕೇಂದ್ರ ಕೇಂದ್ರೀಕರಿಸಿ (ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಮಾತ್ರ) ಪ್ರಾಥಮಿಕ ಶಿಕ್ಷಕರಿಗೆ ಕೊಠಡಿ ಮೇಲ್ವಿಚಾರಣೆ ನೀಡಿ ನಕಲು ತಡೆಗೆ ಗಮನ ಹರಿಸಿದ್ದರು. ಆಗಲೂ ಫಲಿತಾಂಶ ಕುಸಿದಿತ್ತು. ಪಿಯು ಕಾಲೇಜಿಗೆ ವಿದ್ಯಾರ್ಥಿಗಳ ಅಭಾವವೂ ಆಗಿತ್ತು. ಆಗ ಹಿರೇಸಿಂದೋಗಿ ಶಾಲೆಯ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿ, ಕೊಪ್ಪಳಕ್ಕೆ ವರ್ಗಾಯಿಸಲಾಗಿತ್ತು. ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳ ಪೈಕಿ ಕೇವಲ ಮೂವರು ಮಾತ್ರ ತೇರ್ಗಡೆಯಾಗಿದ್ದರು.

ಇದಾದ ಮೇಲೆ ಪರೀಕ್ಷಾ ಪದ್ಧತಿಯ ದೋಷದಿಂದ ನಕಲು ಪ್ರಮಾಣ ಅಧಿಕವಾಗುತ್ತಲೇ ಬಂದಿತು. ಈ ವರ್ಷ ವೆಬ್ ಕಾಸ್ಟಿಂಗ್ ಅಳವಡಿಸುವ ಮೂಲಕ ನಕಲು ನಿರ್ಮೂಲನೆ ಮಾಡುವ ಪ್ರಯತ್ನ ಮಾಡಿದೆ, ಶೇ. 99ರಷ್ಟು ಯಶಸ್ವಿಯಾಗಿದೆ. ಹೀಗಾಗಿ, ಫಲಿತಾಂಶ ಪಾತಳಕ್ಕೆ ಕುಸಿದಿದೆ. ಕೊನೆಗೆ ಫಲಿತಾಂಶ ತೀರಾ ಕಡಿಮೆಯಾಗುತ್ತದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಗ್ರೇಸ್ ಮಾರ್ಕ್ಸ್ ನೀಡುವ ಮೂಲಕ ಒಂದಷ್ಟು ಗೌರವಯುತ ಫಲಿತಾಂಶ ಪ್ರಕಟವಾಗುವಂತೆ ಮಾಡಿದೆ.

ಪ್ರಾಥಮಿಕ ಹಂತದಲ್ಲಿಯೇ ಕಟ್ಟುನಿಟ್ಟು: ಪರೀಕ್ಷೆ ಎಂದರೆ ಮಕ್ಕಳಲ್ಲಿ ಬೇರೆಯದೇ ಕಲ್ಪನೆ ಇರುವಂತೆ ಆಗಿದೆ. ಪ್ರಾಥಮಿಕ ಹಂತದಲ್ಲಿ ಶಿಕ್ಷಕರೇ ಉತ್ತರವನ್ನು ಹೇಳಿ ಬರೆಸುವುದು, ಕಡ್ಡಾಯ ಪಾಸ್ ಇರುವುದರಿಂದ ವಿದ್ಯಾರ್ಥಿಗಳು ನಿರ್ಲಕ್ಷ್ಯ ವಹಿಸುವುದು, ತಪ್ಪು ಉತ್ತರಗಳನ್ನು ಶಿಕ್ಷಕರೇ ತಿದ್ದಿ ಬರೆದು ಪಾಸ್ ಮಾಡುವುದು ಹಾಗೂ ಅವ್ಯಾಹತ ನಕಲು ಮಾಡುವುದಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯ ಮಟ್ಟ ಕುಸಿದಿದೆ. ಇದುವೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ.

ಇನ್ಮುಂದೆ ಪ್ರಾಥಮಿಕ ಹಂತದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಕಲು ರಹಿತ ಪರೀಕ್ಷೆ ಪದ್ಧತಿಗೆ ಚಿಂತನೆ ನಡೆದಿದೆ. ಒಂದನೇ ತರಗತಿಯಿಂದಲೇ ಮಕ್ಕಳಲ್ಲಿ ಪರೀಕ್ಷೆ ಎಂದರೆ ಗೌರವ ಹೆಚ್ಚಳವಾಗುವಂತೆ ಮಾಡುವ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲು ನಿರ್ಧರಿಸಲಾಗಿದೆ. ಮಕ್ಕಳು ಓದಿಯೇ ಪಾಸಾಗುವಂತೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಸರ್ಕಾರಿ ಶಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿರುವಂತೆ ಖಾಸಗಿ ಶಾಲೆಯಲ್ಲಿ ನಕಲು ಹಾವಳಿ ಇಲ್ಲ, ಇದರಿಂದ ಖಾಸಗಿ ಶಾಲೆ ತೇರ್ಗಡೆ ಪ್ರಮಾಣ ಹೆಚ್ಚಿರುತ್ತದೆ. ಅವರು ಕಟ್ಟುನಿಟ್ಟಾಗಿ ಪರೀಕ್ಷೆ ಸಿದ್ಧತೆ ನಡೆಸುತ್ತಾರೆ.

ಈ ಕುರಿತು ಈಗಾಗಲೇ ಜಿಲ್ಲಾವಾರು ಮಾಹಿತಿ ಸಹ ಕಲೆ ಹಾಕಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲಿಯೂ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ.ಪರೀಕ್ಷಾ ಅವಾಂತರ: ಜಿಲ್ಲೆಯ ನೆಲಜರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ ಶೇ. 85ರಷ್ಟು ಅಂಕ ಪಡೆದಿದ್ದ. ಅವರ ತಂದೆ ಒಳ್ಳೆಯ ಖಾಸಗಿ ಶಾಲೆಗೆ ಮಗನನ್ನು ಸೇರಿಸಲು ಬಯಸಿ ಪ್ರವೇಶ ಪರೀಕ್ಷೆ ಬರೆಯಿಸಿದರು. ಆದರೆ ಫಲಿತಾಂಶ ನಕಾರಾತ್ಮಕವಾಗಿತ್ತು. ಇದರಿಂದ ಸಿಟ್ಟಿಗೆದ್ದ ತಂದೆ ನನ್ನ ಮಗನಿಗೆ ಏನೂ ಬರುವುದಿಲ್ಲ, ಇಷ್ಟೊಂದು ಅಂಕ ಹೇಗೆ ನೀಡಿದಿರಿ ಎಂದು ಡಿಡಿಪಿಐಯನ್ನು ಪ್ರಶ್ನಿಸಿದ. ಪರೀಕ್ಷಾ ಮಂಡಳಿಗೂ ದೂರು ನೀಡಿದರು. ನೆಲಜರಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ನೊಟೀಸ್‌ ನೀಡಲಾಯಿತು. ಪರೀಕ್ಷಾ ಮಂಡಳಿಯೇ ಈ ಕೇಂದ್ರದ ಮೇಲೆ ನಿಗಾ ಇಟ್ಟಿತು. ಪರೀಕ್ಷಾ ಪದ್ಧತಿ ಸುಧಾರಣೆಗೆ ಕ್ರಮ ಕೈಗೊಂಡಿತು.

ಪ್ರಾಥಮಿಕ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೆ ಇರುವುದರಿಂದ ಪಲಿತಾಂಶ ಕುಸಿಯುತ್ತಿದೆ.. ಹೀಗಾಗಿ, ಪ್ರಾಥಮಿಕ ಹಂತದಲ್ಲಿಯೇ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಚಿಂತನೆ ನಡೆದಿದೆ ಎಂದು ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದರ ಹೇಳಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ