ಹಾವೇರಿ: ದೇಶ, ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕೊರೋನಾ ಹೊಸ ಅಲೆಯ ಸೋಂಕು ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯ ನಾಲ್ವರಲ್ಲಿ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ.
ಈ ಪೈಕಿ ಹಿರೇಕೆರೂರಿನ ಇಬ್ಬರೂ ಸಹ ಕಡಿಮೆ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ಹಾನಗಲ್ಲ ತಾಲೂಕಿನ ವ್ಯಕ್ತಿಯ ಆರೋಗ್ಯ ತಪಾಸಣೆ ವೇಳೆ ಟಿಬಿ ಪತ್ತೆಯಾದ ಹಿನ್ನೆಲೆ ಅವರನ್ನು ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎನಪೋಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಬ್ಯಾಡಗಿ ತಾಲೂಕಿನ ಗರ್ಭಿಣಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಯಾರೂ ಗಂಭೀರ ಪ್ರಮಾಣದ ಸೋಂಕಿಗೆ ಒಳಗಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಕೋವಿಡ್ ವಾರ್ಡ್ ಆರಂಭ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ತೆರೆಯಲಾಗಿದ್ದು, ಮೊದಲಿನಂತೆ ಶೀತ, ನೆಗಡಿ, ಕೆಮ್ಮು ಇದ್ದವರಿಗೆಲ್ಲಾ ಟೆಸ್ಟ್ ಮಾಡದೇ ಆರೋಗ್ಯ ಇಲಾಖೆ ಮಾರ್ಗದರ್ಶನದ ಪ್ರಕಾರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಈಗಾಗಲೇ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಪೂರೈಸಲಾಗಿದೆ. ಸರ್ಕಾರಗಳ ನಿರ್ದೇಶನದಂತೆ ಪ್ರತಿ ಭಾನುವಾರ ಆಕ್ಸಿಜನ್ ಪ್ಲಾಂಟ್‌ಗಳ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ಮಧುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆ, ಗರ್ಭಿಣಿ- ಬಾಣಂತಿಯರು, ಚಿಕ್ಕಮಕ್ಕಳು ಮತ್ತು ವೃದ್ದರು ಹೆಚ್ಚು ಜಾಗರೂಕತೆಯಿಂದ ಇರಬೇಕು. ಜನರು ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 1080 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 340 ಆಮ್ಲಜನಕ ಸಂಪರ್ಕದ ಬೆಡ್‌ಗಳಿವೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಇರುವ 145 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 28 ಬೆಡ್ ಮೀಸಲಿರಿಸಲಾಗಿದೆ. ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡಲ್ಲಿ ವೆಂಟಿಲೇಟರ್ ಅಗತ್ಯತೆ ಬಿದ್ದರೆ ಜಿಲ್ಲಾಸ್ಪತ್ರೆಯಲ್ಲಿ 2 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 45 ಬೆಡ್ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ 540 ಕಾನ್ಸುಲೆಟರ್ ಜಿಲ್ಲಾಸ್ಪತ್ರೆ ಸೇರಿದಂತೆ ಪ್ರತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಒಂದರಂತೆ 8 ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್‌ಗಳಿವೆ. 909 ಆಕ್ಸಿಜನ್ ಸಿಲಿಂಡರ್, 13 ಆಕ್ಸಿಜನ್ ಜನರೇಶನ್ ಪ್ಲಾಂಟ್‌ಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಮುಂಜಾಗ್ರತೆ ಇರಲಿ: ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುವಾಗ ಗರ್ಭಿಣಿಯರು, ಮಕ್ಕಳು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳವುದು. ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.4 ಸಕ್ರಿಯ ಪ್ರಕರಣ: ಕೊರೋನಾ ಟೆಸ್ಟ್‌ಗೆ 7800 ಕಿಟ್‌ಗಳಿವೆ. ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೊರೋನಾ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸದ್ಯ 4 ಸಕ್ರಿಯ ಪ್ರಕರಣಗಳಿದ್ದು, ಮೂವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನೊಬ್ಬರಿಗೆ ಚಿಕಿತ್ಸೆ ನಡೆದಿದೆ ಎಂದು ಡಿಎಚ್‌ಒ ಡಾ. ರಾಜೇಂದ್ರ ಸುರಗಿಹಳ್ಳಿ ತಿಳಿಸಿದರು.