ದಕ್ಷಿಣ ಕನ್ನಡದಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು: ಕೇರಳ ಗಡಿ ತಲಪಾಡಿಯಲ್ಲಿ ಜಾಗೃತಿ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ತಲಪಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊರೊನಾ ಮಹಾಮಾರಿಯಿಂದ ರಕ್ಷಣೆಗೆ ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಶೀತ ಕಫ ಸೇರಿದಂತೆ ಆರೋಗ್ಯ ಸಮಸ್ಯೆಯಿರುವವರು ಸ್ಥಳೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ಗಡಿ ಪ್ರದೇಶದಲ್ಲಿ ಕೇರಳದಿಂದ ಬಂದಿರುವ ಪ್ರಯಾಣಿಕರು ಗುಂಪು ಸೇರದೆ ಅಂತರ ಕಾಯ್ದುಕೊಳ್ಳಬೇಕು ಎಂದು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು/ಉಳ್ಳಾಲ

ದ.ಕ.ಜಿಲ್ಲೆಯಲ್ಲಿ ಗುರುವಾರ ಇಬ್ಬರಲ್ಲಿ ಕೋವಿಡ್‌ ಪಾಸಿಟಿವ್‌ ಕಂಡುಬಂದಿದೆ. ಇದರೊಂದಿಗೆ ಒಟ್ಟು ಮೂರು ಮಂದಿಯಲ್ಲಿ ಕೊರೋನಾ ಕಾಣಿಸಿದಂತಾಗಿದೆ.

ಗುರುವಾರ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಇಬ್ಬರಲ್ಲಿ ಪಾಸಿಟಿವ್‌ ಪತ್ತೆಯಾಗಿದೆ. ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ವಲಸೆ ಕಾರ್ಮಿಕರೊಬ್ಬರಲ್ಲಿ ಕೋವಿಡ್‌ ಪಾಸಿಟಿವ್‌ ಕಂಡುಬಂದಿದೆ. ಇನ್ನೊಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸುಳ್ಯ ಮೂಲದ 83 ವರ್ಷದ ವೃದ್ಧೆಯಲ್ಲಿ ಕೊರೋನಾ ಕಾಣಿಸಿದೆ. ಈಕೆ ಆಸ್ಮಾದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಕೊರೋನಾ ಪರೀಕ್ಷೆ ಆರಂಭಿಸಿದ ಮೊದಲ ದಿನವೇ ಬುಧವಾರ ಮಂಗಳೂರಿನಲ್ಲಿ ಉಡುಪಿ ಮೂಲದ 82 ವರ್ಷದ ವೃದ್ಧರೊಬ್ಬರಲ್ಲಿ ಪಾಸಿಟಿವ್‌ ಪತ್ತೆಯಾಗಿತ್ತು. ನರ ಸಂಬಂಧಿ ಕಾಯಿಲೆ ಚಿಕಿತ್ಸೆಗೆ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್‌ ಟೆಸ್ಟ್‌ ಮಾಡಿಸಿದಾಗ ಅದರಲ್ಲಿ ಪಾಸಿಟಿವ್‌ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಸಿಟಿವ್‌ ಪತ್ತೆಯಾದವರಿಗೆ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ದ.ಕ.ಜಿಲ್ಲೆಯ ಗಡಿ ಭಾಗಗಳಲ್ಲಿ ಕೇರಳದಿಂದ ಆಗಮಿಸುವವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೇರಳದಲ್ಲಿ‌ ಕೋರೊನಾ ರೂಪಾಂತರಿ ಜೆಎನ್ 1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ-ಕೇರಳ ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಇಲಾಖೆ ಮತ್ತು ತಲಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಕಾರ್ಯಕ್ರಮ ಗುರುವಾರ ಆರಂಭವಾಗಿದೆ.ಕೋಟೆಕಾರು ಆರೋಗ್ಯಕೇಂದ್ರದ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಗಡಿಯಲ್ಲಿ ಬ್ಯಾನರ್ ಹಾಕಿ ಜಾಗೃತಿಯೊಂದಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡುತ್ತಿದ್ದಾರೆ.

ತಲಪಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊರೊನಾ ಮಹಾಮಾರಿಯಿಂದ ರಕ್ಷಣೆಗೆ ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಶೀತ ಕಫ ಸೇರಿದಂತೆ ಆರೋಗ್ಯ ಸಮಸ್ಯೆಯಿರುವವರು ಸ್ಥಳೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ಗಡಿ ಪ್ರದೇಶದಲ್ಲಿ ಕೇರಳದಿಂದ ಬಂದಿರುವ ಪ್ರಯಾಣಿಕರು ಗುಂಪು ಸೇರದೆ ಅಂತರ ಕಾಯ್ದುಕೊಳ್ಳಬೇಕು ಎಂದು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಗಡಿ ಭಾಗದಲ್ಲಿ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ. ಕೇರಳ ಭಾಗದಿಂದ ಬರುವ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ.-ಡಾ.ಗೋಪಿಪ್ರಕಾಶ್‌, ಕೋಟೆಕಾರು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ.

Share this article