ಬ್ಲೂಮ್ ಬಯೋಟೆಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಬ್ಲೂಮ್ ಬಯೋಟೆಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಡಿ. 15 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಚಿಕ್ಕಮಗಳೂರು: ನಗರದ ಹಂಪಾಪುರದಲ್ಲಿರುವ ಬ್ಲೂಮ್ ಬಯೋಟೆಕ್ ಸಂಸ್ಥೆಗೆ ಸಿಒಎಸ್‌ಐಡಿಐಸಿಐ (ಕೌನ್ಸಿಲ್ ಆಫ್‌ ಸ್ಟೇಟ್ ಇಂಡಸ್ಟ್ರಿಯಲ್‌ ಡಿವೆಲಪ್‌ಮೆಂಟ್ ಆ್ಯಂಡ್‌ ಇನ್‌ವೆಸ್ಟ್‌ಮೆಂಟ್ ಕಾರ್ಪೋರೇಷನ್ ಆಫ್‌ ಇಂಡಿಯಾ) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಬ್ಲೂಮ್ ಬಯೋಟೆಕ್ ಮುಖ್ಯಸ್ಥರಾದ ಸುಹಾಸ್ ಮೋಹನ್ ಅವರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಡಿ. 15 ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು.

ಹಂಪಾಪುರ ಬಳಿ ಬಯೋ ಕಂಟ್ರೋಲ್ ಪ್ರಾಡೆಕ್ಟ್ ಲ್ಯಾಬ್ (ಜೈವಿಕ ನಿಯಂತ್ರಕಗಳ ಉತ್ಪಾಧನ ಪ್ರಯೋಗಾಲಯ)ವನ್ನು 2014 ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದರ ಮೂಲ ಉದ್ದೇಶ ಕೃಷಿಯಲ್ಲಿ ಕಂಡು ಬರುವ ಜೈವಿಕ ಪೀಡೆ ನಾಶಕ ತಯಾರು ಮಾಡುವುದು. ಇದೊಂದು ಜೈವಿಕ ಗೊಬ್ಬರ ತಯಾರಿಕಾ ಘಟಕ. ಇಲ್ಲಿ ಟೈಕೊಡರ್ಮ ಹಾರ್ಜಿಯಾನಂ, ಸುಡೋ ಮೋನಾಸ್, ಪಿಎಸ್‌ಬಿ, ಆಝಟೋಬ್ಲಾಕ್ಟರ್, ಅಜೋಸೈಂಲಂ ಮತ್ತಿತರ ಜೈವಿಕ ಗೊಬ್ಬರ ಉತ್ಪಾಧಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಿಕ್ಕಮಗಳೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ ಮಾತನಾಡಿ, ಈ ಸಂಸ್ಥೆ ಸ್ಥಾಪನೆಗೆ ಕೆಎಸ್‌ಎಫ್‌ಸಿಯಿಂದ 2013ರಲ್ಲಿ ಆರ್ಥಿಕ ನೆರವು ನೀಡಲಾಗಿದ್ದು, ಸಂಸ್ಥೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಕೆಎಸ್‌ಎಫ್‌ಸಿ ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಒಂದು. ಈ ಬಾರಿ ಬ್ಲೂಮ್ ಬಯೋಟೇಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನಮ್ಮ ಸಂಸ್ಥೆಯ ವಿಭಾಗಕ್ಕೆ ಮಾತ್ರವಲ್ಲ, ಚಿಕ್ಕಮಗಳೂರು ಜಿಲ್ಲೆಗೂ ಹೆಮ್ಮೆಯ ವಿಷಯ ಎಂದರು.

ಜೈವಿಕ ಗೊಬ್ಬರ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ರೈತರಿಗೂ ಅನುಕೂಲ. ಆದ್ದರಿಂದ ನಮ್ಮ ವಲಯದಿಂದ ಬ್ಲೂಮ್ ಬಯೋಟೇಕ್ ಸಂಸ್ಥೆ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು ಎಂದು ಹೇಳಿದರು. 21 ಕೆಸಿಕೆಎಂ 2

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಸುಹಾಸ್ ಮೋಹನ್ ಅವರು ಸಿಓಎಸ್‌ಐಡಿಐಸಿಐ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು.

Share this article