ನಿರ್ಲಕ್ಷಿಸಿದರೆ ಧರಣಿ ನಡೆಸುವುದಾಗಿ ಅಧಿಕಾರಿಗಳಿಗೆ ಮೇಯರ್ ಪ್ರಭಾವತಿ ಎಚ್ಚರಿಕೆ
ನಗರದ ಶಿರಾ ಗೇಟ್‌ನ ಅಮಾನಿಕೆರೆ ಕೋಡಿ ಸೇತುವೆಯನ್ನು ಒಂದು ತಿಂಗಳಲ್ಲಿ ಅಗಲ ಮಾಡಿ, ರಸ್ತೆ ವಿಸ್ತರಣೆ ಮಾಡದಿದ್ದರೆ ಸಂಘಟನೆಗಳು ಹಾಗೂ ನಾಗರಿಕರ ಜೊತೆ ತಾವು ಸ್ಥಳದಲ್ಲಿ ಧರಣಿ ನಡೆಸುವುದಾಗಿ ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಎಸ್ ಮಾಲ್ ಎದುರಿನ ಕಿರಿದಾದ ರಸ್ತೆಯ ಈ ಕೋಡಿ ಸೇತುವೆಯಿಂದ ನಿತ್ಯ ಆಗುತ್ತಿರುವ ಸಂಚಾರ ಸಮಸ್ಯೆಗಳ ಬಗ್ಗೆ ನಗರಾಡಳಿತದ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರ ಮನವಿ ಮೇರೆಗೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಮೇಯರ್ ಪ್ರಭಾವತಿ, ಇದೊಂದು ಅಪಾಯಕಾರಿ ಸ್ಥಳವಾಗಿದೆ. ವಾಹನ ಸವಾರರು ಈ ಜಾಗದಲ್ಲಿ ಸಾಗಿಹೋಗಲು ನರಕ ಯಾತನೆ ಅನುಭವಿಸುತ್ತಿದ್ದಾರೆ. ತುರ್ತಾಗಿ ಕೋಡಿ ಸೇತುವೆ ಅಗಲಗೊಳಿಸಿ ಸುಗಮ ಸಂಚಾರಕ್ಕೆ ರಸ್ತೆಯನ್ನು ಸಿದ್ಧ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸೇತುವೆ ಹಾಗೂ ರಸ್ತೆ ವಿಸ್ತರಣೆಗೆ ನಗರಪಾಲಿಕೆಯಿಂದ ಒಂದೂವರೆ ಕೋಟಿ ರು. ಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಬಾಕಿ ಹಣ ಹೊಂದಿಸಿ ಜಿಲ್ಲಾಡಳಿತ ಈ ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಾ ಕುಮಾರ್ ಮಾತನಾಡಿ, ಶಿರಾ ಗೇಟ್ ರಸ್ತೆಯಲ್ಲಿ ದಿನೇದಿನೆ ಸಂಚಾರ ಸಾಂದ್ರತೆ ಹೆಚ್ಚಾಗುತ್ತಿದೆ. ರಾಜ್ಯದ ಮುಕ್ಕಾಲು ಭಾಗದ ಜಿಲ್ಲೆಗಳಿಗೆ ಬಸ್‌ಗಳು, ಸರಕು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಜೊತೆಗೆ ಶಾಲಾಕಾಲೇಜು ವಿದ್ಯಾರ್ಥಿಗಳು, ಕೈಗಾರಿಕಾ ಪ್ರದೇಶ, ಮಾರುಕಟ್ಟೆಗೆ ಹೋಗಿಬರುವವರು, ಎಸ್ ಮಾಲ್‌ಗೆ ಬರುವವರು ಇದೇ ರಸ್ತೆ ಅವಲಂಬಿಸಬೇಕಾಗಿದೆ. ಹೀಗಾಗಿ ಇಲ್ಲಿ ಸಂಚಾರ ಒತ್ತಡ ಹೆಚ್ಚಾಗಿ ವಯೋವೃದ್ಧರು, ಶಾಲಾ ಮಕ್ಕಳು, ದ್ವಿಚಕ್ರವಾಹನ ಚಾಲಕರು ಸಂಚಾರ ಮಾಡಲು ಆತಂಕಪಡುವಂತಾಗಿದೆ. ಇತ್ತೀಚೆಗೆ ಇದೇ ಸೇತುವೆ ಮೇಲೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟರು. ಪ್ರತಿನಿತ್ಯ ಒಂದಲ್ಲೊಂದು ರೂಪದಲ್ಲಿ ಅಪಘಾತನಗಳು ನಡೆಯುತ್ತಲೇ ಇವೆ ಎಂದು ಮೇಯರ್ ಗಮನಕ್ಕೆ ತಂದರು.
ಅತಿ ಜರೂರಾಗಿ ಇಲ್ಲಿನ ಸೇತುವೆ, ರಸ್ತೆಯನ್ನು ಅಗಲಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿ ಮುಗಿಯುವವರೆಗೂ ತಕ್ಷಣಕ್ಕೆ ಸೇತುವೆ ಭಾಗದಲ್ಲಿ ರಸ್ತೆ ಉಬ್ಬು ನಿರ್ಮಿಸಿ ಸಂಚಾರ ನಿಯಂತ್ರಿಸಬೇಕು, ರಸ್ತೆ ಕಿರಿದಾಗಿದೆ ಎಂಬ ಎಚ್ಚರಿಕೆಯ ಸೂಚನಾ ಫಲಕ, ಬೀದಿ ದೀಪ ಅಳವಡಿಸಬೇಕು. ದಿನವಿಡೀ ಸಂಚಾರಿ ಪೊಲಿಸರನ್ನು ಇಲ್ಲಿಗೆ ನಿಯೋಜಿಸಬೇಕು, ಅಲ್ಲದೆ, ಇಲ್ಲಿ ಪೊಲೀಸರು ವಾಹನಗಳನ್ನು ತಡೆದು ಸಂಚಾರಿ ನಿಯಮ ಉಲ್ಲಂಘನೆಯ ದಂಡ ವಸೂಲಿ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ ಧನಿಯಾಕುಮಾರ್, ಈ ತಿಂಗಳ ೨೬ರಂದು ಇಲ್ಲಿ ಒಕ್ಕೂಟದಿಂದ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ನಿರ್ಧಾರ ನೋಡಿಕೊಂಡು ತೀರ್ಮಾನ ಮಾಡುವುದಾಗಿ ಹೇಳಿದರು.
ನಗರದ ಶಿರಾ ಗೇಟ್‌ನ ಅಮಾನಿಕೆರೆ ಕೋಡಿ ಸೇತುವೆ ಬಳಿ ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಭೇಟಿ ನೀಡಿ ಪರಿಶೀಲಿಸಿದರು.