ನೀರು ಸೋರಿಕೆ ತಡೆ ಯೋಜನೆಗೆ ಪಾಲಿಕೆ ಬ್ರೇಕ್‌: ಶಾಸಕ ವಿನಯ ಕಿಡಿ

KannadaprabhaNewsNetwork |  
Published : Sep 03, 2026, 02:15 AM IST
ದಸಸದ | Kannada Prabha

ಸಾರಾಂಶ

ಪೈಪ್‌ಲೈನ್ ಸೋರಿಕೆಯಿಂದ ಶೇ. 30-40ರಷ್ಟು ನೀರು ಫೋಲಾಗುತ್ತಿದೆ. ನಾವು ಕಾಮಗಾರಿ ಕೈಗೊಂಡಿದ್ದರೆ ಈಗ ಒಂದು ವರ್ಷ ಆಗುತ್ತಿತ್ತು. ಆದರೆ, ವಿನಯ ಕುಲಕರ್ಣಿ ಅಥವಾ ಕಾಂಗ್ರೆಸ್‌ಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಯಾರದೋ ಮಾತು ಕೇಳಿ ಇದಕ್ಕೆ ಸಾಮಾನ್ಯ ಸಭೆಯಲ್ಲಿ ತಡೆಯೊಡ್ಡಿದೆ ಎಂದು ಶಾಸಕ ವಿನಯ ಕುಲಕರ್ಣಿ ಆರೋಪಿಸಿದರು.

ಧಾರವಾಡ:

ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಸೋರಿಕೆ ತಡೆಗೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಯೋಜನೆ ರೂಪಿಸಿ ₹ 35 ಕೋಟಿ ಅನುದಾನ ತಂದಿದ್ದೆ. ಆದರೆ, ಈ ಯೋಜನೆಗೆ ಮಹಾನಗರ ಪಾಲಿಕೆ ತಡೆ ಹಾಕಿದೆ ಎಂದು ಆರೋಪಿಸಿರುವ ಶಾಸಕ ವಿನಯ ಕುಲಕರ್ಣಿ, ಅಭಿವೃದ್ಧಿಯಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ನಗರದ ಮಹಾನಗರ ಪಾಲಿಕೆಯಲ್ಲಿ ಬುಧವಾರ ತಮ್ಮ ಕ್ಷೇತ್ರದ ಪಾಲಿಕೆಯ ವಾರ್ಡ್‌ಗಳ ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ತಡೆ ಹಿಡಿದ ಕಾಮಗಾರಿಯನ್ನು ತಿಂಗಳೊಳಗೆ ಪಾಲಿಕೆ ಕೈಗೊಳ್ಳಬೇಕು. ಇಲ್ಲವೇ ನನಗೆ ಮಾಡಲು ಬಿಡಬೇಕು. ಈ ರೀತಿ ರಾಜಕೀಯ ಮಾಡಿದರೆ ಪಾಲಿಕೆ ಎದುರು ಧರಣಿ ಕುಳಿತುಕೊಳ್ಳುವೆ ಎಂದು ಎಚ್ಚರಿಕೆ ನೀಡಿದರು.

ಪೈಪ್‌ಲೈನ್ ಸೋರಿಕೆಯಿಂದ ಶೇ. 30-40ರಷ್ಟು ನೀರು ಫೋಲಾಗುತ್ತಿದೆ. ನಾವು ಕಾಮಗಾರಿ ಕೈಗೊಂಡಿದ್ದರೆ ಈಗ ಒಂದು ವರ್ಷ ಆಗುತ್ತಿತ್ತು. ಆದರೆ, ವಿನಯ ಕುಲಕರ್ಣಿ ಅಥವಾ ಕಾಂಗ್ರೆಸ್‌ಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಯಾರದೋ ಮಾತು ಕೇಳಿ ಇದಕ್ಕೆ ಸಾಮಾನ್ಯ ಸಭೆಯಲ್ಲಿ ತಡೆಯೊಡ್ಡಿದೆ ಎಂದು ಕಿಡಿಕಾರಿದರು.

ಹೀಗೆ ಎರಡ್ಮೂರು ಯೋಜನೆಗಳಿಗೆ ಸರ್ಕಾರದಿಂದ ಹಣ ತಂದರೂ ಅದಕ್ಕೆ ಒಪ್ಪಿಗೆ ನೀಡಿಲ್ಲ. ನಾನು ನನ್ನ ಕ್ಷೇತ್ರದ ಜನರಿಗಾಗಿ ದುಡ್ಡು ತರುವೆ. ಬೇಕಿದ್ದರೆ ನೀವೇ ಉದ್ಘಾಟನೆ ಮಾಡಿಕೊಳ್ಳಿ ಎಂದ ಶಾಸಕರು, ಪಾಲಿಕೆ ಬಿಜೆಪಿ ಸದಸ್ಯರಿಗೆ ಅಭಿವೃದ್ಧಿಗೆ ಬೇಕಾಗಿಲ್ಲ. ಹೀಗಾಗಿ ಪ್ರಗತಿ ಪರಿಶೀಲನೆ ಸಭೆಗೆ ಬಂದಿಲ್ಲ. ಇದು ಕಾಂಗ್ರೆಸ್ ಪಕ್ಷದ ಮೀಟಿಂಗ್ ಅಲ್ಲ. ಗೈರು ಉಳಿದರೆ ಅದು ಜನರಿಗೆ ನಾವು ಮಾಡಿದ ಮೋಸವಾಗುತ್ತದೆ. ಮುಂದಿನ ಪಾಲಿಕೆಯ ಸಾಮಾನ್ಯ ಸಭೆಗೆ ನಾನೂ ಹಾಜರಾಗಿ ಇದೆಲ್ಲವನ್ನೂ ಕೇಳುತ್ತೇನೆ. ಶಿವಳ್ಳಿಯಲ್ಲಿ ಬಯೋಗ್ಯಾಸ್ ಪ್ಲಾಂಟ್‌ನ್ನು ಆ ಕ್ಷೇತ್ರದ ಶಾಸಕರ ಗಮನಕ್ಕೆ ತರದೇ ಸ್ಥಾಪಿಸಲು ಹೊರಟರೆ ಹೇಗೆ? ಎಂದು ಪ್ರಶ್ನಿಸಿದರು.

ಗ್ರಾಮೀಣ ಕ್ಷೇತ್ರದ 9 ವಾರ್ಡ್‌ಗಳಲ್ಲಿ ₹ 110 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರಸ್ತೆ ನಿರ್ಮಿಸುವ ಮುನ್ನ ಯುಜಿಡಿ, ಪೈಪ್‌ಲೈನ್ ಅಳವಡಿಸಬೇಕು. ನೀರಿನ ಹೊಸ ಪೈಪ್‌ಲೈನ್ ಅಳವಡಿಕೆ ಮಾಡಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, 9 ವಾರ್ಡ್‌ಗಳ 211 ಕಿಮೀ ಪೈಪ್‌ಲೈನ್ ಲಿಂಕ್ ಪ್ರಕ್ರಿಯೆ ಮುಗಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಡಿಸೆಂಬರ್‌ಗೆ ಇದು ಮುಗಿಯಲಿದೆ ಎಂದರು.

ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳು ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ, ಚರಂಡಿ ಮತ್ತು ಗಟಾರಗಳ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಹಾಗೂ ಅಡ್ಡಿಯಾಗುವ ಮರದ ಕೊಂಬೆ ತೆರವು ಮಾಡಬೇಕು ಎಂದ ಶಾಸಕರು, 3 ವರ್ಷಗಳಲ್ಲಿ ವಿವಿಧ ಪೈಪ್‌ಲೈನ್, ವಿದ್ಯುತ್ ಹಾಗೂ ಕೇಬಲ್ ಕಾಮಗಾರಿಗಳಿಗಾಗಿ ಎಷ್ಟು ರಸ್ತೆಗಳನ್ನು ಕತ್ತರಿಸಲಾಗಿದೆ. ಇದಕ್ಕೆ ಕಟಿಂಗ್ ಶುಲ್ಕ ಪಡೆದಿದ್ದೆಷ್ಟು? ಎಂಬುದರ ಲೆಕ್ಕ ನೀಡುವಂತೆ ಆಯುಕ್ತರಿಗೆ ಸೂಚಿಸಿದರು. ಅದೇ ರೀತಿ ಧಾರವಾಡ ಸೂಪರ್ ಮಾರ್ಕೆಟ್ ಅಭಿವೃದ್ಧಿಗೆ ಪಿಪಿಪಿ ಮಾದರಿ ಯೋಜನೆ ರೂಪಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಜನನ-ಮರಣ ಪ್ರಮಾಣಪತ್ರ:ಧಾರವಾಡ ಜನರಿಗೆ ಅನುಕೂಲವಾಗುವಂತೆ ವಾರದಲ್ಲಿ ಐದು ದಿನ ಜನನ ಹಾಗೂ ಮರಣ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆ ಆರಂಭಿಸಬೇಕು. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನಿಯೋಜಿಸಲು ಶಾಸಕರು ಸೂಚಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅರವಿಂದ ಏಗನಗೌಡರ, ಬಸವರಾಜ ಹುಬ್ಬಳ್ಳಿ, ವಿಜಯ ಕುಮಾರ, ಅರವಿಂದ ಜಮಖಂಡಿ ಇತರರಿದ್ದರು.

ನಂ-1 ಹೆರಿಗೆ ಆಸ್ಪತ್ರೆ: ಭರವಸೆ

ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ಗರ್ಭಿಣಿಯರು ಸಂದಿಗ್ಧತೆಯಲ್ಲಿದ್ದಾರೆ. ಹೀಗಾಗಿ ಹಳೇಬಸ್‌ನಿಲ್ದಾಣದ ಬಳಿ ಇರುವ ಪಾಲಿಕೆ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರೆ ಒಂದೇ ವರ್ಷದಲ್ಲಿ ಅದನ್ನು ನಂ.1 ಆಸ್ಪತ್ರೆಯನ್ನಾಗಿ ಮಾಡುವೆ. ಪಾಲಿಕೆಯೇ ಅಭಿವೃದ್ಧಿಪಡಿಸಲು ನಿರ್ಧರಿಸಿದರೆ ಅದಕ್ಕೂ ಸಹಕಾರ ನೀಡುವೆ. ಪಾಲಿಕೆಯು ಈ ಬಗ್ಗೆ ಚರ್ಚಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ನಿಯಮ ತಿದ್ದುಪಡಿ ಕೈಬಿಡಲು ಆಗ್ರಹ
ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಪೂರಕ: ಸುನೀಲ ಮಹಾಂತಶೆಟ್ಟರ