ಕ್ರೀಡೆ ಪರಸ್ಫರ, ಸ್ನೇಹ, ಬಾಂಧವ್ಯ ವೃದ್ಧಿಸುವ ಹೊಂದಾಣಿಕೆ ಮತ್ತು ನಾಯಕತ್ವದ ಗುಣ ಬೆಳೆಯುವಲ್ಲಿ ನೆರವಾಗುತ್ತದೆ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಕ್ರೀಡೆ ಪರಸ್ಫರ, ಸ್ನೇಹ, ಬಾಂಧವ್ಯ ವೃದ್ಧಿಸುವ ಹೊಂದಾಣಿಕೆ ಮತ್ತು ನಾಯಕತ್ವದ ಗುಣ ಬೆಳೆಯುವಲ್ಲಿ ನೆರವಾಗುತ್ತದೆ ಎಂದು ಸರ್ಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.

ಬುಧವಾರ ಜಿಲ್ಲಾ ಆಡಳಿತ, ಜಿಪಂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಹಾಗೂ ಶ್ರೀ ಟಿ.ಬಿ.ಮಾನ್ವಿ ಸರಕಾರಿ ಪಪೂ ಕಾಲೇಜು ಇವರ ಸಹಯೋಗದಲ್ಲಿ ಅಗಡಿ ಕಾಲೇಜು ಮೈದಾನದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಪೂರಕ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಪಾಠಕ್ಕೂ ಅಷ್ಟೆ ಆದ್ಯತೆ ನೀಡಬೇಕು, ಸಾಧನೆ ಮಾಡುವ ಛಲ ನಿಮ್ಮಲ್ಲಿದ್ದರೆ ಗುರಿ ತಲುಪುವುದು ಸುಲಭವಾಗಲಿದೆ. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಯೋಗ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಲ್ಲಿ ಮಾನಸಿಕವಾಗಿ ಸದೃಢವಾಗಿ ಬೆಳೆದುನಿಲ್ಲಬಹುದು. ಈ ನಿಟ್ಟಿನಲ್ಲಿ ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಬೇಕು ಗೆಲುವು, ಸೋಲುಗಳನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಕರೆನೀಡಿದರು.

ಅಗಡಿ ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಮಾತನಾಡಿ, ತಾಲೂಕು ಕ್ರೀಡಾಂಗಣ ನಿರ್ಮಾಣವನ್ನು ಆದಷ್ಟು ಶೀಘ್ರ ಮಾಡಿದರೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ, ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಬೇಕಾಗಿದೆ ಎಂದರು.

ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು.

ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪಪೂ ಕಾಲೇಜು ಭೂದಾನಿಗಳಾದ ತೋಂಟೇಶ ಮಾನ್ವಿ, ಶಿವಯೋಗಿ ಮಾನ್ವಿ, ಮಹೇಶ ಉಪ್ಪಿನ, ಬಸವರಾಜ ಚಕ್ರಸಾಲಿ, ಮಂಜುನಾಥ ಗೊರವರ, ಮೋಯಿದ್ದಿನ್ ಸೂರಣಗಿ, ಮಂಜುನಾಥ ಬಂಡಿವಾಡ, ಸರಸ್ವತಿ ಹುಲ್ಲಣ್ಣವರ, ಅಶೋಕ ಕಳ್ಳಿಮನಿ, ಎಸ್.ಟಿ. ಮುದಿಗೌಡ್ರ, ಪ್ರಕಾಶ ಹೊಂಗಲ್, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಫ್. ಕೊಡ್ಲಿ, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಸುರೇಶ ಕೊಡ್ಲಿ ಹಾಗೂ ತಾಲೂಕಿನ ಪಪೂ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು. ಬಿ.ಎನ್. ದೊಡ್ಡಮನಿ ಸ್ವಾಗತಿಸಿದರು. ಎನ್.ಓ. ಸಾತಪೂತೆ ಪ್ರತಿಜ್ಞಾವಿಧಿ ಭೋದಿಸಿದರು, ಬಿ.ಎಂ. ಮರಳಿಹಳ್ಳಿ ನಿರೂಪಿಸಿದರು. ತಾಲೂಕಿನ ಒಟ್ಟು ೬ ಪಪೂ ಕಾಲೇಜುಗಳ ನೂರಾರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.