ಭಾರತೀಯ ವಿದ್ಯುತ್ ನಿಯಮ–೧೯೫೬ರ ನಿಯಮ ೪೫ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ, ರಾಜ್ಯದ ವಿದ್ಯುತ್ ಗುತ್ತಿಗೆದಾರರು ಹಾಗೂ ಕಾರ್ಮಿಕರು ಶಿಗ್ಗಾಂವಿ ತಹಸೀಲ್ದಾರ್‌ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಶಿಗ್ಗಾಂವಿ: ಭಾರತೀಯ ವಿದ್ಯುತ್ ನಿಯಮ–೧೯೫೬ರ ನಿಯಮ ೪೫ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ, ರಾಜ್ಯದ ವಿದ್ಯುತ್ ಗುತ್ತಿಗೆದಾರರು ಹಾಗೂ ಕಾರ್ಮಿಕರು ಶಿಗ್ಗಾಂವಿ ತಹಸೀಲ್ದಾರ್‌ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರ ಸಂಘದ ಪೂರ್ವನಿಯೋಜಿತ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ ಮನ್ನಣ್ಣವರ್ ಮಾತನಾಡಿ, ಪ್ರಸ್ತಾವಿತ ನಿಯಮ ತಿದ್ದುಪಡಿಯಿಂದ ವಿದ್ಯುತ್ ಗ್ರಾಹಕರು, ರೈತರು, ವಿದ್ಯುತ್ ಗುತ್ತಿಗೆದಾರರು ಹಾಗೂ ಲಕ್ಷಾಂತರ ಕಾರ್ಮಿಕರಿಗೆ ತೊಂದರೆಯಾಗಲಿದೆ. ವಿದ್ಯುತ್ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳ ಬದುಕಿನ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಖಾಸಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀತಿಗಳನ್ನು ರೂಪಿಸುತ್ತಿದೆ. ವಿಮಾನಯಾನ, ರೈಲ್ವೆ ಹಾಗೂ ಮೊಬೈಲ್ ಕ್ಷೇತ್ರಗಳಲ್ಲಿ ಉಂಟಾದ ಬದಲಾವಣೆಗಳಿಂದ ಅನೇಕ ಉದ್ಯೋಗಿಗಳಿಗೆ ತೊಂದರೆಯಾಗಿರುವುದನ್ನು ಕಾಣಬಹುದು. ಇದೀಗ ವಿದ್ಯುತ್ ಕ್ಷೇತ್ರದಲ್ಲಿಯೂ ಇದೇ ರೀತಿಯ ಬದಲಾವಣೆಗೆ ಮುಂದಾಗಿರುವುದು ಆತಂಕಕಾರಿ ಸಂಗತಿ ಎಂದರು.

ವಿದ್ಯುತ್ ಕಾಮಗಾರಿಗಳಿಗೆ ಸಂಬಂಧಿಸಿದ ನಿಯಮ ೪೫ರ ತಿದ್ದುಪಡಿಯಿಂದ ಸಣ್ಣ ಗುತ್ತಿಗೆದಾರರು ಹಾಗೂ ವಿದ್ಯುತ್ ಕೆಲಸವನ್ನೇ ಅವಲಂಬಿಸಿರುವ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಕೆಇಆರ್‌ಸಿ ತನ್ನ ನೂತನ ಕರಡು ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ವಿಶೇಷವಾಗಿ ಗಮನಹರಿಸಿ, ಕೆಇಆರ್‌ಸಿಗೆ ಪ್ರಸ್ತಾವನೆ ಕೈಬಿಡುವಂತೆ ಸೂಚಿಸಬೇಕು. ವಿದ್ಯುತ್ ಗ್ರಾಹಕರು, ರೈತರು, ಗುತ್ತಿಗೆದಾರರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಈ ಪ್ರಸ್ತಾವನೆ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಿಗ್ಗಾಂವಿ ತಾಲೂಕಿನ ವಿದ್ಯುತ್ ಗುತ್ತಿಗೆದಾರರಾದ ನಾಗಭೂಷಣ ಹಿರೇಮಠ, ಅಬ್ದುಲ್ ಹರಪನಹಳ್ಳಿ, ಮಲ್ಲಪ್ಪ ಹೊನ್ನಳ್ಳಿ, ನವೀನ ಸಾಸನೂರ, ಚಂದ್ರಶೇಖರ ಕೆ.ಟಿ. ಪಾಟೀಲ, ಶರಣಪ್ಪ ದೇಸಾಯಿ, ಶಿವರಾಜ್ ಹಜೀಜ್ ಮುಲ್ಲಾ, ನವೀನ ಇಂಗಳಗಿ, ಶಿವಯೋಗಿ ಕಲ್ಯಾಣಮಠ, ಅಬ್ದುಲ್ ಅದಂಬಾಯಿ, ಶಂಕರ ಕರಡಿ ಉಪಸ್ಥಿತರಿದ್ದರು.