ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗಬಾರದು.
ಕಾರವಾರ: ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಜತೆಗೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು, ಭೂಮಿ ಮತ್ತು ಮೂಲಭೂತ ಹಕ್ಕುಗಳಿಗೂ ರಕ್ಷಣೆ ನೀಡಬೇಕು. ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಿ ಅರಣ್ಯ, ಜನವಸತಿ ಹಾಗೂ ಕೃಷಿ ಪ್ರದೇಶಗಳ ಕುರಿತು ಸಮಗ್ರ ಮರುಸರ್ವೆ ನಡೆಸಬೇಕು ಎಂದು ಬಿಜೆಪಿ ಮುಖಂಡ, ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗಬಾರದು. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ಶಾಲೆ, ಅಂಗನವಾಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.ಜೋಯಿಡಾ ತಾಲೂಕಿನ ಕೆಲವು ಗ್ರಾಮಗಳ ಜನರನ್ನು ಪರಿಹಾರ ನೀಡಿ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ, ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಮೂಲ ಸೌಲಭ್ಯ ಕಲ್ಪಿಸುವುದಕ್ಕೂ ಹಲವು ನಿರ್ಬಂಧಗಳಿವೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸ್ಥಳೀಯ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಸುನೀಲ್ ಹೆಗಡೆ ಆತಂಕ ವ್ಯಕ್ತಪಡಿಸಿದರು.ಜೋಯಿಡಾ ತಾಲೂಕಿನ 111 ಗ್ರಾಮಗಳು ಸೇರಿದಂತೆ 6 ರಾಜ್ಯಗಳ 188 ತಾಲೂಕುಗಳು ವರದಿ ವ್ಯಾಪ್ತಿಗೆ ಬರುತ್ತವೆ. ಕಸ್ತೂರಿ ರಂಗನ್ ವರದಿ ವಾಸ್ತವಿಕ ಕ್ಷೇತ್ರ ಸಮೀಕ್ಷೆಗಿಂತ, ಅಂಕಿ- ಅಂಶಗಳ ಆಧಾರದಲ್ಲಿ ಸಿದ್ಧಗೊಂಡಿರುವುದು ತಮ್ಮ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಬಫರ್ ವಲಯ, ವನ್ಯಜೀವಿ ಪ್ರದೇಶ, ಟೈಗರ್ ಸ್ಯಾಂಕ್ಚುರಿ, ಕೋರ್ ಏರಿಯಾ ಸೇರಿದಂತೆ ವಿವಿಧ ಪ್ರದೇಶಗಳನ್ನು ಮತ್ತೊಮ್ಮೆ ಸಮಗ್ರವಾಗಿ ಸರ್ವೆ ನಡೆಸಬೇಕು. ನೈಸರ್ಗಿಕ ಹಾಗೂ ಸಾಂಸ್ಕೃತಿಕ ಭೂದೃಶ್ಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಸ್ಥಳೀಯರ ಭೂಮಿ, ಕೃಷಿ, ಜೀವನೋಪಾಯ ಹಾಗೂ ಆರ್ಥಿಕ ಭದ್ರತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.ಸಮರ್ಪಕ ಸರ್ವೆ ನಡೆಸದೆ ಜನವಸತಿ ಹಾಗೂ ಕೃಷಿ ಭೂಮಿಗಳನ್ನು ನಿರ್ಬಂಧಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸುವುದರಿಂದ ಸ್ಥಳೀಯರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಅಲ್ಲದೆ ಅರಣ್ಯ ಇಲಾಖೆಯ ಉದ್ಯೋಗದಲ್ಲಿಯೂ ಸ್ಥಳೀಯರಿಗೆ ಸೂಕ್ತ ಆದ್ಯತೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಿಧಾನಸಭೆ ಅಧಿವೇಶನಕ್ಕೂ ಮುನ್ನ ಪ್ರತಿಯೊಂದು ಗ್ರಾಮದಲ್ಲೂ ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯವನ್ನು ದಾಖಲಿಸಬೇಕು. ಗ್ರಾಮಸ್ಥರ ಅಭಿಪ್ರಾಯದ ಆಧಾರದ ಮೇಲೆ ರಾಜ್ಯ ಸರ್ಕಾರ ಸಮಗ್ರ ವರದಿ ಸಿದ್ಧಪಡಿಸಿ ವಿಧಾನಸಭೆಯಲ್ಲಿ ಚರ್ಚಿಸಬೇಕು. ಅಗತ್ಯವಿದ್ದಲ್ಲಿ ನ್ಯಾಯಮಂಡಳಿ ಹಾಗೂ ನ್ಯಾಯಾಲಯಗಳ ಮುಂದೆ ರಾಜ್ಯದ ನಿಲುವನ್ನು ಸಮರ್ಥವಾಗಿ ಮಂಡಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುನೀಲ್ ಹೆಗಡೆ ಆಗ್ರಹಿಸಿದರು.ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅಗತ್ಯವಿದ್ದರೆ ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಸುನೀಲ್ ಹೆಗಡೆ ಎಚ್ಚರಿಕೆ ನೀಡಿದರು.
ಶಿವಾಜಿ ಗೋಸಾವಿ, ಅರುಣ ಕೊಮ್ರೆಕರ್, ಸಂತೋಷ ಸಾವಂತ, ಗಿರೀಶ ಗೋಸಾವಿ, ಸಿದ್ದು ಜೋಕೇರಿ, ಸಂತೋಷ ವೇಳಿಪ್ ಇದ್ದರು. ಹಳಿಯಾಳ ಶಾಸಕರ ವಿರುದ್ಧ ಸುನೀಲ್ ಹೆಗಡೆ ವಾಗ್ದಾಳಿಕಾರವಾರ: ಪಿಎಸ್‌ಐಗಳ ವರ್ಗಾವಣೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಆಡಿಯೋ ಪ್ರಕರಣ ಮತ್ತು ಹಳಿಯಾಳದಲ್ಲಿ ನಿರ್ಮಾಣವಾಗಿರುವ ವ್ಯವಸ್ಥೆಯ ದುಃಸ್ಥಿತಿಗೆ ಸ್ಥಳೀಯ ಶಾಸಕರೇ ಕಾರಣ ಎಂದು ಬಿಜೆಪಿ ಮುಖಂಡ ಹಾಗೂ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು.ಕಾರವಾರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ರಾಜಕೀಯ ನಾಯಕರೇ ಪ್ರಮುಖ ಕಾರಣ. ರಾಜಕೀಯ ನಾಯಕರಿಗೆ ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪವೇ ಉದ್ಯೋಗದಂತಾಗಿದೆ ಎಂದು ದೂರಿದರು.ರಾಜ್ಯದಲ್ಲಿ ಜವಾನನ ಹಂತದಿಂದ ಹಿಡಿದು ಉನ್ನತ ಅಧಿಕಾರಿಗಳ ಮಟ್ಟದವರೆಗೆ ಭ್ರಷ್ಟಾಚಾರ ವ್ಯಾಪಕವಾಗುತ್ತಿರುವುದಕ್ಕೆ ಮೇಲ್ಮಟ್ಟದ ರಾಜಕೀಯ ವ್ಯವಸ್ಥೆಯೇ ಕಾರಣ. ಶಾಸಕರು ಹಾಗೂ ಸಚಿವರ ಮಟ್ಟದಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಅದರ ಪರಿಣಾಮ ಆಡಳಿತ ವ್ಯವಸ್ಥೆಯ ಕೆಳಹಂತದ ಅಧಿಕಾರಿಗಳ ಮೇಲೂ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.ಹಿಂದೆ ಅಧಿಕಾರಿಗಳಿಗೆ ನಿಗದಿತ ಅವಧಿಯ ವರ್ಗಾವಣೆ ವ್ಯವಸ್ಥೆ ಇತ್ತು. ಆದರೆ ಈಗ ಅಧಿಕಾರಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ರಾಜಕೀಯ ಪ್ರಭಾವಿಗಳ ಒತ್ತಡ ಸೇರಿದಂತೆ ಹಲವು ಅನಧಿಕೃತ ಬೇಡಿಕೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಇಂತಹ ವಾತಾವರಣದಲ್ಲಿ ಅಧಿಕಾರಿಗಳು ಕೂಡ ತಪ್ಪು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಹೆಚ್ಚುತ್ತದೆ ಎಂದರು.ಒಸಿ, ಜೂಜು ಹಾಗೂ ಮಾದಕ ವಸ್ತುಗಳ ಬಳಕೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯುವುದು ಪೊಲೀಸ್ ಮತ್ತು ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಹಾಗೂ ಒತ್ತಡವಿದ್ದರೆ ಕಾನೂನು ಜಾರಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.