ಮಂಜುನಾಥ ಕೆ.ಎಂ.
ಕ್ಲೀನ್ ವಾರ್ಡ್-ಗ್ರೀನ್ ವಾರ್ಡ್ ಧ್ಯೇಯದೊಂದಿಗೆ ವಾರ್ಡಿನ ಮಿಲ್ಲಾರ್‌ಪೇಟೆ ಪ್ರದೇಶದಲ್ಲಿ ಮನೆಮನೆಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತ ಗಿಡ-ಮರ ಬೆಳೆಸಲು ಹೇಳುವ ಜತೆಗೆ ಇಬ್ರಾಹಿಂ ಬಾಬು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನೂ ಮೂಡಿಸುತ್ತಿದ್ದಾರೆ. ಪರಿಣಾಮ ವಾರ್ಡಿನಲ್ಲಿ ಸುಮಾರು 750ಕ್ಕೂ ಅಧಿಕ ಗಿಡಗಳು ಜೀವ ತುಂಬಿಕೊಂಡು ನಳನಳಿಸುತ್ತಿವೆ. ಪರಿಸರ ದಿನಾಚರಣೆ ಸೇರಿದಂತೆ ವಿವಿಧ ಪ್ರಮುಖ ಹಬ್ಬ-ಹರಿದಿನಗಳಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡಿ ಪೋಷಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ.
ವಾರ್ಡಿನಲ್ಲಿ ಓಡಾಡುವಾಗಲೂ ಗಿಡಮರಗಳ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಸ್ಥಳೀಯರಲ್ಲೂ ಇವರಿಗೆ ಸಾಥ್ ನೀಡುತ್ತಿದ್ದಾರೆ. ಇದೇ ವಾರ್ಡಿನ ಸ್ವಚ್ಛತಾ ಪರಿವೀಕ್ಷಕ ಜಗನ್ನಾಥ ರೆಡ್ಡಿ ಅವರು ಹಸಿಕಸ-ಒಣಕಸ ಸಂಸ್ಕರಣೆ ಮಾಡಿ ಎರೆಹುಳು ಗೊಬ್ಬರ ತಯಾರಿಸಿ ಸ್ಥಳೀಯರಿಗೆ ಉಚಿತವಾಗಿ ನೀಡುತ್ತಿದ್ದು, ವಾರ್ಡಿನ ಗಿಡ-ಮರಗಳ ಪೋಷಣೆಗೆ ಹೆಚ್ಚು ಸಹಕಾರಿಯಾಗಿದೆ. ಸ್ಥಳೀಯ ಸರ್ಕಾರಿ ಶಾಲೆಯಲ್ಲೂ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುತ್ತಿರುವುದರಿಂದ ಮಕ್ಕಳೂ ಗಿಡಗಳ ಪಾಲನೆ- ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಸ್ವಚ್ಛತೆಯಲ್ಲೂ ಈ ವಾರ್ಡ್ ಮಾದರಿ ಎನಿಸಿದೆ. ಕಸ ರಸ್ತೆಗೆ ಸುರಿಯದೆ ಮನೆಗೆ ಬರುವ ವಾಹನಕ್ಕೆ ನೀಡುವ ಪದ್ಧತಿಯನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಬರುತ್ತಿರುವುದರಿಂದ ಕ್ಲೀನ್ ವಾರ್ಡ್ ಗ್ರೀನ್ ವಾರ್ಡ್ ಕನಸು ಸಾಕಾರವಾಗಿದೆ.
ನಮ್ಮ ತಂದೆ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿದ್ದರು. ಅವರ ಜೊತೆ ಗಿಡಗಳಿಗೆ ನೀರು ಬಿಡಲು ಹೋಗುತ್ತಿದ್ದೆ. ಬಾಲ್ಯದಿಂದಲೇ ನನಗೆ ಪರಿಸರದ ಬಗ್ಗೆ ಅಪಾರ ಪ್ರೀತಿ. ಈ ವರೆಗೆ ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಿದ್ದೆ. ಅವುಳಲ್ಲಿ ಸುಮಾರು 750ಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ಜೊತೆಗೆ ನಮ್ಮ ವಾರ್ಡಿನ ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ಹೀಗಾಗಿ ಕ್ಲೀನ್ ವಾರ್ಡ್-ಗ್ರೀನ್ ವಾರ್ಡ್ ನನ್ನ ಕನಸು ನನಸಾಗುವ ಹಾದಿಯಲ್ಲಿದೆ ಎನ್ನುತ್ತಾರೆ 13ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು.