ಬಳ್ಳಾರಿ: ಡಿ.ಕೆ.ಶಿವಕುಮಾರ್ ಅವರ ನೂತನ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದ ಮುಖಂಡರು ಇಲ್ಲಿನ ಕೌಲ್‌ಬಜಾರ್ ಪ್ರದೇಶದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಮೀರ್ ಅಹ್ಮದ್ ಖಾನ್ ಬರೀ ಮುಸ್ಲಿಂ ಸಮುದಾಯಕ್ಕೆ ಸೀಮಿತ ವ್ಯಕ್ತಿ ಅಲ್ಲ. ಎಲ್ಲ ಸಮುದಾಯಗಳಿಗೆ ಬೇಕಾದ ವ್ಯಕ್ತಿಯಾಗಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಎಲ್ಲ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕೇರಳ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಜಮೀರ್ ಸಾಕಷ್ಟು ಶ್ರಮಿಸಿದ್ದಾರೆ. ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹ ಜಮೀರ್ ಅಹ್ಮದ್ ಖಾನ್ ಅವರೇ ಪ್ರಮುಖ ಕಾರಣವಾಗಿದ್ದಾರೆ. ಸುಮಾರು 80 ಲಕ್ಷ ಜನಸಂಖ್ಯೆ ಇರುವ ಮುಸ್ಲಿಂ ಸಮಾಜಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ. ಮುಸ್ಲಿಮರ ಮತಗಳು ಕಾಂಗ್ರೆಸ್‌ಗೆ ಸೀಮಿತವಾಗಿದ್ದು, ಇದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ರಾಷ್ಟ್ರೀಯ ಮುಖಂಡರು ಚರ್ಚಿಸಿ ನಡೆಸಿ, ಎರಡನೇ ಹಂತದ ಸಂಪುಟದಲ್ಲಾದರೂ ಜಮೀರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಜಿಲಾನ್ ಬಾಷಾ, ನೂರ್ ಅಹ್ಮದ್, ಸಾದಿಕ್, ಸಿದ್ಧಿಕಿ, ನಜೀರ್, ಇರ್ಫಾನ್, ಮಹ್ಮದ್ ರಫೀಕ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.