ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ನರೇಗಾ ಯೋಜನೆ ಅನುಷ್ಟಾನದಲ್ಲಿ ಅನೇಕ ಲೋಪಗಳಿದ್ದು, ಅವುಗಳನ್ನು ಸರಿಪಡಿಸುವಲ್ಲಿ ವಿಶೇಷ ಗಮನಹರಿಸುವ ಜೊತೆಗೆ ಸರ್ಕಾರಕ್ಕೆ ಸಭೆಯ ನಡಾವಳಿಯನ್ನು ಸಲ್ಲಿಸುವಂತೆ ಜಿಪಂ ಸಿಇಒಗೆ ಸಂಸದ ಬಿ.ವೈ.ರಾಘವೇಂದ್ರ ತಾಕೀತು ಮಾಡಿದರು.ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಚೀಟಿ ಪಡೆದವರಿಗೆ ಪಾವತಿಸುವ ಹಣದಲ್ಲಿ ಅಕ್ರಮಗಳಿಗೆ ಅವಕಾಶ ಇರುವ ಬಗ್ಗೆ ಸಮಿತಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕ್ರಿಯಾ ಯೋಜನೆಯಲ್ಲಿನ ಅನೇಕ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಕ್ರಿಯಾಯೋಜನೆ ತಯಾರಿಸುವ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಂತರ ಕ್ರಿಯಾಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
ಅಮೃತ್ 1.0 ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ನೀರು ಸರಬರಾಜು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಮೃತ್ 2.0 ಯೋಜನೆಯಡಿಯಲ್ಲಿ ನೀರು ಸರಬರಾಜು ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ 1000 ಕೋಟಿ ವೆಚ್ಚದ ಯುಜಿಡಿ ಯೋಜನೆ ಅನುಷ್ಠಾನದ ಬಗ್ಗೆ ದೂರುಗಳು ಬರುತ್ತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಪಿಎಂಎಜಿವೈ ಯೋಜನೆಯಿಂದ ಎಸ್ಸಿ, ಎಸ್ಟಿ ಕಾಲೋನಿಗೆ ಉತ್ತಮವಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಗನವಾಡಿ ಕೇಂದ್ರ, ಓಡಾಡಲು ಉತ್ತಮ ರಸ್ತೆ, ಚರಂಡಿ, ಸೋಲರ್ ಲೈಟ್ ಮಾಡಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಶಿಕಾರಿಪುರ, ಹಾನಗಲ್ ಮಾರ್ಗವಾದ ಟೋಲ್‌ಗೇಟ್ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಟೋಲ್ ಗೇಟ್ ವಿರೋಧಿಸಿ ಪ್ರತಿಭಟನೆ ಮಾಡಿದ ಬೆನ್ನಲ್ಲೆ ಸಚಿವರ ಮಟ್ಟದಲ್ಲಿ ಸಭೆ ಮಾಡಲಾಗಿದೆ. ಹಾಗೂ ಸರ್ಕಾರಕ್ಕೂ ಪತ್ರವನ್ನು ಬರೆದಿದ್ದೇವೆ. ಇದು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್‌ಬಾನು, ದಿಶಾ ಸಮಿತಿಯ ಹಿರಿಯ ಸದಸ್ಯ ಕೆ.ಎಸ್.ಗುರುಮೂರ್ತಿ ಮತ್ತಿತರರು ಇದ್ದರು.
-----------ಶಿವಮೊಗ್ಗ-ಆನವಟ್ಟಿ ಮಾರ್ಗದಲ್ಲಿ ಸವಳಂಗ ಮತ್ತು ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿ 57ರಲ್ಲಿ ಅಳವಡಿಸಿರುವ ಟೋಲ್ ಸುಂಕ ವಸೂಲಿ ಗೇಟುಗಳು ಅವೈಜ್ಞಾನಿಕವಾಗಿದೆ. ಇದು ಸರಿಯಲ್ಲ. ಅಲ್ಲದೇ ಸಾರ್ವಜನಿಕರ ಶೋಷಣೆಗೆ ಅವಕಾಶ ನೀಡಿದಂತಾಗಿದೆ. ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಈ ಗೇಟುಗಳನ್ನು ಅಳವಡಿಸಿ ಅನೇಕ ವರ್ಷಗಳೇ ಸಂದಿವೆ. ಇವುಗಳನ್ನು ತ್ವರಿತವಾಗಿ ತೆರೆವುಗೊಳಿಸಬೇಕು.
ಕೆ.ಎಸ್.ಗುರುಮೂರ್ತಿ, ದಿಶಾ ಸಮಿತಿ ಸದಸ್ಯ ಶಿಕಾರಿಪುರ.----------
ರಾಷ್ಟ್ರೀಯ ಹೆದ್ದಾರಿ 15ರಲ್ಲಿನ ಸಕ್ಕರೆ ಕಾರ್ಖಾನೆ ಸಮೀಪ ದುಮ್ಮಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ-ಮುಂಗಟ್ಟು ಇಟ್ಟುಕೊಂಡಿರುವಲ್ಲಿ ಆಗಾಗ್ಗೆ ಆಕಸ್ಮಿಕ ಅಪಘಾತಗಳು ನಡೆಯುತ್ತಲೇ ಇವೆ. ಇವುಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ.
----ದುಮ್ಮಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಹಲವು ದಶಕಗಳಿಂದ ವಾಸವಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟು ಬೇರೆಡೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಚನ್ನಗಿರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮಗಳ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. - ಎಸ್.ಎನ್.ಚನ್ನಬಸಪ್ಪ, ಶಾಸಕ.