ಭ್ರಷ್ಟಾಚಾರ-ದಿವಾಳಿತನವೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ

KannadaprabhaNewsNetwork |  
Published : May 20, 2026, 01:15 AM IST
19ಕೆಆರ್ ಎಂಎನ್ 1.ಜೆಪಿಜಿಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ದಿವಾಳಿತನ, ಅಭಿವೃದ್ಧಿ ಶೂನ್ಯ, ಬೆಲೆ ಏರಿಕೆ, ಶೇಕಡ 60ರಷ್ಟು ಕಮಿಷನ್, ಭ್ರಷ್ಟಾಚಾರ, ರೈತರು-ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ, ವೋಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಠೀಕರಣ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 3 ವರ್ಷಗಳ ದೊಡ್ಡ ಸಾಧನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು

ರಾಮನಗರ: ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ದಿವಾಳಿತನ, ಅಭಿವೃದ್ಧಿ ಶೂನ್ಯ, ಬೆಲೆ ಏರಿಕೆ, ಶೇಕಡ 60ರಷ್ಟು ಕಮಿಷನ್, ಭ್ರಷ್ಟಾಚಾರ, ರೈತರು-ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ, ವೋಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಠೀಕರಣ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 3 ವರ್ಷಗಳ ದೊಡ್ಡ ಸಾಧನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಿದೆ. ಸರ್ಕಾರಿ ನೌಕರರಿಗೂ ವೇತನ ಕೊಡಲು ಖಜಾನೆಯಲ್ಲಿ ಹಣ ಇಲ್ಲದಂತಾಗಿದೆ. ರೈತರು, ಸರ್ಕಾರಿ ಅಧಿಕಾರಿಗಳು, ಬಾಣಂತಿಯರ ಸಾವಿಗೆ ಕಾರಣವಾಗಿರುವ ಕೊಲೆಗೆಡುಕರ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ 3 ವರ್ಷಗಳ ಸಾಧನೆ ಸಮರ್ಪಣೆ ಸಮಾವೇಶದ ಬದಲು ಭ್ರಷ್ಟಾಚಾರದ ಸಮಾವೇಶ, ದಿವಾಳಿತನದ ಸಮಾವೇಶ ಅಂತ ಹೆಸರಿಟ್ಟಿಕೊಳ್ಳಬೇಕಿತ್ತು ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ 37 ಸಾವಿರ ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿದೆ. ಗುತ್ತಿಗೆ ಕೊಡಲು, ಹಣ ಪಾವತಿ ಮಾಡಲು ಕಮಿಷನ್ ಪಡೆಯುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ಶೇಕಡ 40ರಷ್ಟು ಕಮಿಷನ್ ಆಪಾದನೆ ಮಾಡಿದ್ದರು. ಆದರೀಗ ಕಾಂಗ್ರೆಸ್ ಸರ್ಕಾರ ನೇರವಾಗಿಯೇ ಕನಿಷ್ಠ ಶೇಕಡ 60ರಷ್ಟು ಕಮಿಷನ್ ಪಡೆಯುತ್ತಿದೆ. ಶೇಕಡ 100ರಷ್ಟು ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಲೇವಡಿ ಮಾಡಿದರು.

ಆತ್ಮಹತ್ಯೆ ಗ್ಯಾರಂಟಿ ಸರ್ಕಾರ:

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಷ್ಟ್ರದಲ್ಲಿ 5 ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದರಲ್ಲಿ ಒಬ್ಬರು ಕರ್ನಾಟಕದ ರೈತ ಇದ್ದಾನೆ. ಕಾಂಗ್ರೆಸ್ ಆಡಳಿತಕ್ಕೆ ಬಂದ ದಿನದಿಂದಲೂ ಇಲ್ಲಿವರೆಗೆ ಸುಮಾರು 2800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಕಾಳಜಿಯಾಗಲಿ ಅಥವಾ ಕನಿಕರವಾಗಲಿ ವ್ಯಕ್ತಪಡಿಸಿಲ್ಲ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಉಡಾಫೆ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.

ಗೃಹ ಇಲಾಖೆ ಸೇರಿ ಹಲವು ಇಲಾಖೆಗಳಲ್ಲಿ ಬಹಿರಂಗವಾಗಿಯೇ ವರ್ಗಾವಣೆ ದಂಧೆ ನಡೆಯುತ್ತಿದೆ. ರಕ್ಷಕರೇ ಭಕ್ಷಕರಾಗುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯ 90 ಅಧಿಕಾರಿಗಳು ಡಕಾಯಿತ ಪ್ರಕರಣಗಳಲ್ಲಿ ಅಮಾನತುಗೊಂಡಿದ್ದಾರೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಆರೋಪಿದರು.

ಈ ಹಿಂದೆ ಯಾವ ಸರ್ಕಾರದ ಅವಧಿಯಲ್ಲಿಯೂ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಆದರೀಗ ವರ್ಗಾವಣೆ ಕಿರುಕುಳ ತಾಳಲಾರದೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು ಮಾತ್ರವಲ್ಲ, ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಆತ್ಮಹತ್ಯೆ ಗ್ಯಾರಂಟಿ ಕೊಡುಗೆ ಎಂದು ದೂರಿದರು.

ತುಷ್ಠೀಕರಣ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ:

ಆತಂಕವಾದಿಗಳು ಕಾಂಗ್ರೆಸ್ ಸರ್ಕಾರದ ಸಹೋದರರು. ರಾಮೇಶ್ವರಂ ಕೆಫೆ ಮೇಲೆ ಬಾಂಬ್ ಹಾಕಿದವರು, ಕುಕ್ಕರ್ ಬಾಂಬ್ ಇಟ್ಟವರು, ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರೆಲ್ಲರು ಕಾಂಗ್ರೆಸ್ ಸರ್ಕಾರದ ಸಹೋದರರು. ಅವರ ಮೇಲಿನ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾದಾಗ ನ್ಯಾಯಾಲಯ ಮಧ್ಯ ಪ್ರವೇಶಿಸಿ ತಡೆಯಾಜ್ಞೆ ನೀಡಿತು. ಇದೆಲ್ಲ ನೋಡಿದರೆ ರಾಜ್ಯದಲ್ಲಿ ರಾಜಕೀಯ ಪ್ರೇರಿತ ಮತ್ತು ರಾಜಕೀಯ ದುರದ್ದೇಶಿತ ಆಡಳಿತ ನಡೆಯುತ್ತಿರುವುದು ಸ್ಪಷ್ಟವಾಗಿದೆ. ವೋಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಠೀಕರಣ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಗುದ್ದಾಟ ನಡೆದಿದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಮತ್ತೊಬ್ಬರು ಕುರ್ಚಿ ಕಸಿದುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು 50 ವರ್ಷಗಳ ರಾಜಕೀಯ ಅನುಭವ ಉಳ್ಳವರು. ನಾಡಿನ ಜನರಿಗೆ ಬೇಡ ಅಹಿಂದ ವರ್ಗಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಅಮೆರಿಕಾ - ಇರಾನ್ ಯುದ್ಧದ ಪರಿಣಾಮ ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಗುತ್ತಿಲ್ಲ. ಭಾರತದಲ್ಲಿ ಅವುಗಳ ಕೊರತೆಯಾಗದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಿದೆ. ಈಗಷ್ಟೇ ತೈಲಬೆಲೆಗಳ ದರವನ್ನು 3 ರುಪಾಯಿ ಹೆಚ್ಚಳ ಮಾಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಶೇ.25ರಷ್ಟು ಇದ್ದ ವ್ಯಾಟ್ ಅನ್ನು ಶೇ.31ಕ್ಕೆ ಹೆಚ್ಚಿಸಿತು. 5 - 6 ತೈಲ ಬೆಲೆ ಹೆಚ್ಚಿಸಿದವರು ಯಾರು ಎಂದು ಪ್ರಶ್ನಿಸಿದರು.

ನಿಗಮ ಮಂಡಳಿಗಳಿಗೆ ಶೇಕಡ 70ರಷ್ಟು ಅನುದಾನ ಕಡಿತ ಮಾಡಲಾಗಿದೆ. ಕೈಗಾರಿಕೆಗಳ ಪ್ರಗತಿ ಶೇಕಡ 15ರಿಂದ 5ಕ್ಕೆ ಕುಸಿದಿದೆ. ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಸಾಮಾನ್ಯ ಎನ್ನುವಂತಾಗಿದೆ. ಇದೊಂದು ಆತ್ಮಸಾಕ್ಷಿ ಇಲ್ಲದ ಸರ್ಕಾರ. ಕಂಡ ಕಂಡಲ್ಲಿ ಕಲೆಕ್ಷನ್ ಪಾಯಿಂಟ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಾಜಿ ಅಧ್ಯಕ್ಷ ದೇವರಾಜು, ರಾಮನಗರ ತಾಲೂಕು ಅಧ್ಯಕ್ಷ ಗೌತಮ್ ಗೌಡ, ಮಾಗಡಿ ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ, ಮುಖಂಡರಾದ ಸುರೇಶ್, ಎಸ್.ಆರ್.ನಾಗರಾಜ್, ಪದ್ಮನಾಭ ಮತ್ತಿತರರು ಇದ್ದರು.

ಕೋಟ್ ...............

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸುತ್ತಿದೆ. ಮೆರಿಟ್‌ಗೆ ಧಕ್ಕೆಯಾಗದಂತೆ ಮರು ಪರೀಕ್ಷೆಗೆ ಕ್ರಮ ವಹಿಸಲಾಗಿದೆ. ಆದರೆ, ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣದಲ್ಲಿ ರಾಜ್ಯಸರ್ಕಾರ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಬಂಧಿಸುವ ಕೆಲಸ ಮಾಡಿಲ್ಲ. ಇಲ್ಲಿ ಇಲಾಖೆ ಪರೀಕ್ಷೆಗಳು ವಜಾಗೊಳ್ಳುತ್ತವೆ, ಇಲ್ಲ ಮುಂದೂಡಲ್ಪಡುತ್ತವೆ.

- ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಉಪಮುಖ್ಯಮಂತ್ರಿ

ಬಾಕ್ಸ್‌.........

ಅಭಿವೃದ್ಧಿಗೆ ವಿರೋಧ ಇಲ್ಲ, ರೈತರ ಹಿತವೂ ಮುಖ್ಯ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಯಂತಹ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ವಿರೋಧ ಇಲ್ಲ. ಆದರೆ, ರೈತರ ಹಿತವೂ ಮುಖ್ಯವಾಗುತ್ತದೆ. ಅವರನ್ನು ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಯೋಜನೆಗಳಾಗಿ ಅನುಷ್ಠಾನ ಮಾಡುವಾಗ ಸಂಪನ್ಮೂಲ ಕ್ರೂಢೀಕರಿಸಬೇಕು. ಯೋಜನೆ ಭೂಸ್ವಾಧೀನ ಪಡಿಸಿಕೊಳ್ಳುವ ರೈತರಿಗೆ 2013ರ ಕಾನೂನು ಪ್ರಕಾರ ಪರಿಹಾರ ಕೊಡಬೇಕು. ಎನ್ ಜಿಟಿ ಪ್ರಕಾರ ನೀರಾವರಿ ಪ್ರದೇಶ ಸ್ವಾಧೀನ ಪಡಿಸಿಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ ರೈತರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದರು.

ಬೆಂಗಳೂರು ನಗರದಲ್ಲಿಯೇ ಅಭಿವೃದ್ಧಿಯಾಗದೆ ಉಳಿದಿರುವ ಭೂಮಿ ಇದೆ. ಅದನ್ನು ಬಿಟ್ಟು ರೈತರ ಭೂಮಿ ಕಸಿಯುವುದು ಸರಿಯಲ್ಲ. ಈಗ 35 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಈಗಿರುವ ಕಂಪನಿಗಳೇ ಜಾಗ ಖಾಲಿ ಮಾಡುತ್ತಿವೆ. ಸಾಲ ಪಡೆದು ಯೋಜನೆ ಜಾರಿಗೊಳಿಸಿದರೆ ಪ್ರಯೋಜನ ಇಲ್ಲ. ಆ ಸಾಲವನ್ನು ಮರು ಪಾವತಿಸುವ ಶಕ್ತಿಯೂ ಇರಬೇಕು. ಈಗಲೇ ರಾಜ್ಯ ಸರ್ಕಾರ ಏಳೂವರೆ ಲಕ್ಷ ಕೋಟಿ ಸಾಲ ಮಾಡಿದ್ದು, ಪ್ರತಿ ವರ್ಷ 53ಸಾವಿರ ಕೋಟಿ ಬಡ್ಡಿ ಪಾವತಿಸುತ್ತಿದೆ. ಸರ್ಕಾರದಲ್ಲಿ ನೌಕರರಿಗೆ ವೇತನ ಕೊಡಲು ಹಣ ಇಲ್ಲ. ಹಾಗಾಗಿ ಯಾವುದೇ ಯೋಜನೆಗಳನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

19ಕೆಆರ್ ಎಂಎನ್ 1.ಜೆಪಿಜಿ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇವಲ 5 ತಿಂಗಳಿಗೇ ಜಿಲ್ಲಾಧಿಕಾರಿ ವರ್ಗಾವಣೆ
ನಗರಕ್ಕೆ ಶೀಘ್ರ 5 ಹೊಸ ಮಿನಿ ಕೆಎಸ್‌ಆರ್‌ಟಿಸಿ ಬಸ್‌