ರಾಜ್ಯದಲ್ಲಿ ಮೀತಿ ಮೀರಿದ ಭ್ರಷ್ಟಾಚಾರ: ಮಾಜಿ ಶಾಸಕ ಸುನೀಲ ಹೆಗಡೆ

KannadaprabhaNewsNetwork |  
Published : Jun 28, 2025, 12:18 AM IST
27ಎಚ್.ಎಲ್.ವೈ-1: ತಾಲೂಕಿನ ತೇರಗಾಂವ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ  ಎದುರು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆಯವರು ಜನಾಕ್ರೋಶ  ಪ್ರತಿಭಟನೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವು ಆಡಳಿತದಲ್ಲಿದೆ.

ಹಳಿಯಾಳ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಪ್ರತಿ ಇಲಾಖೆಗಳಲ್ಲಿ ಮೀತಿ ಮೀರಿರುವ ಭ್ರಷ್ಟಾಚಾರ, ಅಲ್ಪಸಂಖ್ಯಾತ ಓಲೈಕೆ ರಾಜಕಾರಣ, ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಬಿಜೆಪಿ ಘಟಕದಿಂದ ತಾಲೂಕಿನೆಲ್ಲೆಡೆ ಎಲ್ಲ 20 ಗ್ರಾಪಂಗಳ ಎದುರು ಜನಾಕ್ರೋಶ ಪ್ರತಿಭಟನೆ ನಡೆಯಿತು.

ತಾಲೂಕಿನ ತೇರಗಾಂವ ಗ್ರಾಮದ ಗ್ರಾಪಂ ಕಾರ್ಯಾಲಯದ ಎದುರು ಮಾಜಿ ಶಾಸಕ ಸುನೀಲ ಹೆಗಡೆ ಪ್ರತಿಭಟನೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವು ಆಡಳಿತದಲ್ಲಿದೆ. ಕಾಂಗ್ರೆಸ್ ಪಕ್ಷದ ಶಾಸಕರೇ ಇಂದು ಸರ್ಕಾರದ ಆಡಳಿತ ವೈಫಲ್ಯ ಮೀರಿದ ಭ್ರಷ್ಟಾಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸರ್ಕಾರಕ್ಕೆ ಯಾವುದೇ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಸರ್ಕಾರವು ತಾಪಂ, ಜಿಪಂ ಚುನಾವಣೆಗಳನ್ನು ಒಂದಿಲ್ಲೊಂದು ನೆವ ಹೇಳಿ ಮುಂದೂಡಲಾರಂಭಿಸಿದೆ. ಮುಂಬರಲಿರುವ ಗ್ರಾಪಂ ಚುನಾವಣೆಯಾಗಲಿ ಅಥವಾ ನಗರ ಮತ್ತು ಪಟ್ಟಣ ಪ್ರದೇಶಗಳ ಪೌರ ಸಂಸ್ಥೆಗಳ ಚುನಾವಣೆಗಳನ್ನು ಮಾಡಿಸುವ ಧೈರ್ಯ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ಗುಡುಗಿದರು.

ಗ್ರಾಮೀಣ ಜನರ ಸಮಸ್ಯೆಗಳಿಗೆ, ಅವರ ಬೇಕು-ಬೇಡಗಳಿಗೆ ಧ್ವನಿಯಾಗಲು ಬಿಜೆಪಿ ಇದೆ. ಅದಕ್ಕಾಗಿ ಗ್ರಾಮಸ್ಥರು ಬಿಜೆಪಿ ಆರಂಭಿಸಿದ ಈ ಜನಾಕ್ರೋಶ ಪ್ರತಿಭಟನೆಗೆ ತಮ್ಮ ಬೆಂಬಲ ಸಹಕಾರ ನೀಡಬೇಕು. ರಾಜ್ಯದಲ್ಲಿನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಪಕ್ಷ ವಿರಮಿಸದು ಎಂದರು.

ಜಿಲ್ಲಾ ಪ್ರಮುಖ ಮಂಗೇಶ ದೇಶಪಾಂಡೆ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸರ್ಕಾರ ಘೋಷಿಸಿರುವ ಕಾಮಗಾರಿಗಳನ್ನು ನಡೆಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಭ್ರಷ್ಟ ಮತ್ತು ಭಂಡ ಸರ್ಕಾರವಿದೆ. ಈ ಸರ್ಕಾರ ತೊಲಗದ ಹೊರತು ರಾಜ್ಯದ ಅಭಿವೃದ್ಧಿ ಆಗದು. ಕೇಂದ್ರ ಸರ್ಕಾರದ ಅನುದಾನದಲ್ಲಿಯೇ ಗ್ರಾಪಂಗಳಲ್ಲಿ ವಿವಿಧ ಕೆಲಸಗಳು ನಡೆಯುತ್ತಿವೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನದಿಂದಲ್ಲ ಎಂದು ಆರೋಪಿಸಿದರು.

ಬಿಜೆಪಿ ಪ್ರತಿಭಟನೆ ಬೆಂಬಲಿಸಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಸುರೇಶ ಶಿವಣ್ಣನವರ, ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ಜ್ಞಾನೇಶ ಮಾನಗೆ ಇದ್ದರು.

ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಶಿವಾಜಿ ನರಸಾನಿ, ಅನಿಲ ಮುತ್ನಾಳ, ವಿ.ಎಂ. ಪಾಟೀಲ, ಗಣಪತಿ ಕರಂಜೇಕರ, ಶ್ರೀನಿವಾಸ ಘೋಟ್ನೆಕರ, ಆಕಾಶ ಉಪ್ಪೀಣ, ಶಂಕರ ಗಳಗಿ, ಬಸಣ್ಣ ಕುರುಬಗಟ್ಟಿ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌