ಶಾಂತಿನಗರದ ಜನರಲ್ಲಿ ಕಾಣಿಸಿಕೊಂಡ ವೈರಲ್ ಜ್ವರ

KannadaprabhaNewsNetwork |  
Published : Jun 28, 2025, 12:18 AM IST
ಕಂಪ್ಲಿ ತಾಲೂಕಿನ ಶಾಂತಿನಗರದ ಪ್ರತಿ ಮನೆಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಲಾರ್ವ ಸಮೀಕ್ಷೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ನೆಲ್ಲೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರದಲ್ಲಿ ಜನತೆಯಲ್ಲಿ ಕೆಲದಿನಗಳಿಂದ ವೈರಲ್ ಜ್ವರ ಕಾಣಸಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ತಾಲೂಕಿನ ನೆಲ್ಲೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರದಲ್ಲಿ ಜನತೆಯಲ್ಲಿ ಕೆಲದಿನಗಳಿಂದ ವೈರಲ್ ಜ್ವರ ಕಾಣಸಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ ಮಾತನಾಡಿ, ಜೂ.21ರಂದು ಮೂವರ ಜ್ವರ ಪ್ರಕರಣ, 23ರಂದು ಒಂದು ಜ್ವರ, 24ರಂದು ಒಂದು ಜ್ವರ, ಒಂದು ಶೀತ, 25ರಂದು 3 ಜ್ವರ, 20 ಶೀತ, ಮೈಕೈನೋವು, 26ರಂದು 2 ಶೀತ, 27ರಂದು ಒಂದು ಶೀತ ಪ್ರಕರಣ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಐವರನ್ನು ಎಮ್ಮಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವಂತೆ ಶಿಫಾರಸ್ಸು ಮಾಡಿದೆ. ಶಾಂತಿನಗರದಲ್ಲಿ 70ಮನೆಗಳಿದ್ದು, ಪ್ರತಿ ಮನೆ ಮನೆಗೂ ತೆರಳಿ ಲಾರ್ವ ಸಮೀಕ್ಷೆ ಮಾಡಿದೆ. ಕುದಿಸಿ ಆರಿಸಿದ ನೀರನ್ನೇ ಸೇವಿಸುವಂತೆ, ನೆಗಡಿ, ಜ್ವರ ಇತರೆ ಲಕ್ಷಣ ಕಾಣಿಸಿಕೊಂಡಲ್ಲಿ ಕೂಡಲೇ ತಾತ್ಕಾಲಿಕ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ. ಮೂವರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬಳ್ಳಾರಿಯ ಮಲೇರಿಯಾ ಆಸ್ಪತ್ರೆಗೆ ಕಳುಹಿಸಿದೆ. ಒಂದು ಪ್ರಕರಣ ಶಂಕಿತ ಟೈಫಾಯಿಡ್‌ಗೆ ಚಿಕಿತ್ಸೆ ನೀಡಿದೆ. ಗ್ರಾಮದಲ್ಲಿನ ಆರ್.ಓ ಪ್ಲಾಂಟ್, ಸರ್ಕಾರಿ ಶಾಲೆಯ ನೀರಿನ ಮಾದರಿ ಪರೀಕ್ಷಿಸಿದ್ದು ಕುಡಿಯಲು ಯೋಗ್ಯವಾಗಿದೆ. ಇನ್ನು ವೈರಲ್ ಫೀವರ್ ತಪಾಸಣೆ, ಚಿಕಿತ್ಸೆಗಾಗಿ ಶಾಂತಿನಗರದ ಅಂಗನವಾಡಿ ಕೇಂದ್ರದಲ್ಲಿ ಜೂ.20ರಿಂದ ಫೀವರ್ ಕ್ಲಿನಿಕ್ (ತಾತ್ಕಾಲಿಕ ಚಿಕಿತ್ಸಾ ಕೇಂದ್ರ) ತೆರೆದು ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಎಮ್ಮಿಗನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಫಾರೂಕ್ ಮಾತನಾಡಿ, ವಾತಾವರಣ ಬದಲಾವಣೆ ಹಿನ್ನೆಲೆ ವೈರಲ್ ಫೀವರ್ ಕಾಣಿಸಿಕೊಂಡಿದ್ದು, ನಾಲ್ಕೈದು ದಿನಗಳಲ್ಲಿ ಸುಧಾರಿಸಿಕೊಳ್ಳಲಿದ್ದಾರೆ. ಶಾಂತಿನಗರದ ಜನತೆಯ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌