ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಭ್ರಷ್ಟಾಚಾರ ನಡೆಸಿರುವ ಅಧಿಕಾರಿ, ಜಾಬ್ ಕಾರ್ಡ್‌ದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರವೂ ಲಕ್ಷ್ಮೀಪುರ ಗ್ರಾಪಂ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಯಾವುದೇ ಗಿಡ ನೆಡದೆ ನೆಟ್ಟಿರುವುದಾಗಿ ತಪ್ಪು ದಾಖಲೆ ನೀಡಿ ಭ್ರಷ್ಟಾಚಾರ ನಡೆಸಿದವರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆಯೂ ಮನವಿ ಸಲ್ಲಿಸಿ ತನಿಖೆ ಮಾಡಲು ಒತ್ತಾಯಿಸಲಾಗಿತ್ತು. ಆದರೂ ಇದಕ್ಕೆ ಅಧಿಕಾರಿಗಳು ಇದರ ಬಗ್ಗೆ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಗಿಡ ನೆಡದಿರುವ ಕುರಿತು ವಿಡಿಯೋ, ದಾಖಲೆಕೂಡ ನೀಡಲಾಗಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕು ಎಂದು ಪಟ್ಟು ಹಿಡಿದರು.ಪರಿಸರ ಪ್ರೇಮಿ ವೆಂಕಟೇಶ್ ನೆಟ್ಟಿರುವ ಗಿಡಗಳನ್ನೆ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ. ಹೊಸಕೊಪ್ಪಲುಕಟ್ಟೆ ಕೆಲಸ ಮಾಡದೆ, ರಸ್ತೆ ನಿರ್ಮಾಣ ಮಾಡದೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಬಾರಿ ಭ್ರಷ್ಟಾಚಾರ ನಡೆಯುತ್ತಿದ್ದು ತನಿಖೆ ನಡೆಯಬೇಕು ಎಂದು ಪಟ್ಟು ಹಿಡಿದರು.
ತಾಪಂ ಇಒ ಸುಷ್ಮಾ ಘಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿ ಆಲಿಸಿದರು. ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪುಟ್ಟಸ್ವಾಮಿ, ಬಸವರಾಜು, ದಿಲೀಪ್, ಮಹೇಶ್, ಸುರೇಶ್, ತಮ್ಮಯ್ಯ, ರವಿ, ಗಿರೀಶ್, ಉಮೇಶ್, ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.