ಪಿಡಿಒ ಚಿನ್ನಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ

KannadaprabhaNewsNetwork |  
Published : Mar 25, 2026, 01:15 AM IST
ಉದ್ಘಾಟನೆ | Kannada Prabha

ಸಾರಾಂಶ

15ನೇ ಹಣಕಾಸು ಆಯೋಗದ ಅನುದಾನ, ವರ್ಗ-1 ಹಾಗೂ ವರ್ಗ 2 ಖಾತೆಗಳ ನಿಧಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಹಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಈ ಸಂಬಂಧ ಇಲಾಖಾ ವಿಚಾರಣೆ ನಡೆಸುವಂತೆ ಈಗಾಗಲೇ ಆದೇಶಗಳಿದ್ದರೂ, ತನಿಖೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಹಾಗೂ ಜವಾಬ್ದಾರಿತನದ ಕೊರತೆ ತೋರಿರುವುದು ಜನಾಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತ್ತು ಮಾಡಿ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸಮಯಬದ್ಧ ತನಿಖೆ ನಡೆಸುವಂತೆ ಸಂಘಟನೆ ಆಗ್ರಹಿಸುತ್ತದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಭಾಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಿನ್ನಸ್ವಾಮಿ ಅವರ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತುಗೊಳಿಸದಿದ್ದರೆ ಗುರುವಾರ 26ನೇ ತಾರೀಖಿನಿಂದ ತಾಲೂಕು ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಗಗನ್ ಹಾಡ್ಲಳ್ಳಿ ಎಚ್ಚರಿಕೆ ನೀಡಿದ್ದಾರೆ.​ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒ ಚಿನ್ನಸ್ವಾಮಿ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳ ರಕ್ಷಣೆಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.ದಾಖಲೆ ಸಮೇತ ಭ್ರಷ್ಟಾಚಾರವನ್ನು ಪ್ರಸ್ತುತಪಡಿಸಿದರೂ, "ಅಮಾನತು ಮಾಡಲು ಸಾಧ್ಯವಿಲ್ಲ " ಎನ್ನುತ್ತಿರುವ ಇಒ ಅವರ ಧೋರಣೆ ಖಂಡನೀಯ. ತಕ್ಷಣವೇ ಪಿಡಿಒ ಅವರನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಕರವೇ ತಾಲೂಕು ಘಟಕದ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕಾರ್ಯದರ್ಶಿ ಮತ್ತು ಉಸ್ತುವಾರಿ ರಘು ಪಾಳ್ಯ ಮಾತನಾಡಿ 15ನೇ ಹಣಕಾಸು ಆಯೋಗದ ಅನುದಾನ, ವರ್ಗ-1 ಹಾಗೂ ವರ್ಗ 2 ಖಾತೆಗಳ ನಿಧಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಹಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಈ ಸಂಬಂಧ ಇಲಾಖಾ ವಿಚಾರಣೆ ನಡೆಸುವಂತೆ ಈಗಾಗಲೇ ಆದೇಶಗಳಿದ್ದರೂ, ತನಿಖೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಹಾಗೂ ಜವಾಬ್ದಾರಿತನದ ಕೊರತೆ ತೋರಿರುವುದು ಜನಾಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತ್ತು ಮಾಡಿ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸಮಯಬದ್ಧ ತನಿಖೆ ನಡೆಸುವಂತೆ ಸಂಘಟನೆ ಆಗ್ರಹಿಸುತ್ತದೆ.ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಘಟನೆ ಮುಖಂಡರು, ವಿವಿಧ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು, ಯುವಕರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಲಾಗುತ್ತಿದೆ. ಆದ್ದರಿಂದ ಪತ್ರಕರ್ತ ಮಿತ್ರರು ಈ ಭ್ರಷ ಅಧಿಕಾರಿಗಳ ವಿರುದ್ಧ ಧ್ವನಿಯೆತ್ತಿರುವ ಸಂಘಟನೆಯ ಧ್ವನಿಯನ್ನು ಸಮಾಜದ ಮುಂದೆ ತಲುಪಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಕುಮಾರ್‌, ರೈತ ಘಟಕದ ವಸಂತ ಬೊಮ್ಮನಕೆರೆ, ಕಾರ್ಮಿಕ ಘಟಕದ ಸಂಗ್ರಾಮ್, ಸುನಿಲ್, ಮಂಜುನಾಥ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧನಾತ್ಮಕ ಭಾವನೆ ರೂಢಿಸಿಕೊಳ್ಳಿ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮನೋರಂಜನೆ ವಾರ