ಕೊಪ್ಪಳ: ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದ ಸಾವಿರ ದಿನಗಳ ಅವಧಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು.
ರಾಜ್ಯದ ಜನರ ಅತ್ಯಂತ ದುರಾಡಳಿತದ ದಿನಗಳೆಂದರೇ ಈ ಸಾವಿರ ದಿನಗಳಾಗಿವೆ ಎಂದು ಜಿಲ್ಲಾ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸರ್ಕಾರದ ಹಗರಣಗಳು ಹೇಳುತ್ತಾ ಹೋದರೇ ಹನುಮಂತನ ಬಾಲ ಬೆಳೆದಂತೆ ಬೆಳೆಯುತ್ತಿದೆ. ಪ್ರಮುಖವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಭೂ ಹಂಚಿಕೆ ವಿವಾದ, ವಾಲ್ಮೀಕಿ ನಿಗಮ ಹಣ ದುರುಪಯೋಗ ಪ್ರಕರಣ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಂಬಂಧಿತ ಹಣ ವರ್ಗಾವಣೆ ವಿಚಾರ ಸೇರಿದಂತೆ ಹಲವು ಆರ್ಥಿಕ ಹಗರಣಗಳು ಜನರ ಕಣ್ಣು ಮುಂದಿವೆ.
ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮತ್ತು ವರ್ಗಾವಣೆಗಳಿಗೆ ಲಂಚ ಬೇಡಿಕೆ ಆರೋಪದ ಕುರಿತು ಸಾಕ್ಷ್ಯಾಧ್ಯಾರವಿದ್ದರೂ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಮರ್ಥಿಸಿಕೊಂಡ ಲಜ್ಜೆಗೇಡಿ ಸರ್ಕಾರವಿದು ಎಂದು ನಾಯಕರು ಕಟುವಾಗಿ ತಿವಿದಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದ ಹಣ ವ್ಯಯವಾಗಿದ್ದು, ಅದರ ಅನುಷ್ಠಾನದಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಟೀಕೆಯೂ ವ್ಯಕ್ತವಾಗಿದೆ.ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಕ್ರಮವೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.