ಸಾಂಸ್ಕೃತಿಕ ಆಚರಣೆಗಳಿಂದಲೇ ಭಾವನಾತ್ಮಕ ಸಂಬಂಧ ಗಟ್ಟಿ

KannadaprabhaNewsNetwork |  
Published : Feb 18, 2026, 02:15 AM IST
ವೀರೇಶ್ವರ ಸ್ವಾಮೀಜಿ | Kannada Prabha

ಸಾರಾಂಶ

ಸಂಸ್ಕಾರವಿಲ್ಲದ ಶಿಕ್ಷಣ ಹಾಗೂ ಮಕ್ಕಳ ಮೇಲಿನ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಗಂಭೀರ ಸಮಸ್ಯೆಗಳಾಗಿ ಪರಿಣಮಿಸಬಹುದು. ಬಾಲ್ಯದಲ್ಲೇ ಮೌಲ್ಯಗಳನ್ನು ಬೆಳೆಸದೆ ಹೋದರೆ, ಅದೇ ಮಕ್ಕಳು ಮುಂದೆ ಸಮಾಜಕ್ಕೆ ಭಾರವಾಗುವ ಸಾಧ್ಯತೆ ಹೆಚ್ಚುತ್ತದೆ.

ಧಾರವಾಡ:

ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕುಟುಂಬ ವ್ಯವಸ್ಥೆಯ ದುರ್ಬಲತೆಯ ಸ್ಪಷ್ಟ ಪ್ರತಿಬಿಂಬವಾಗಿದೆ ಎಂದು ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಕೊಟಬಾಗಿ ಗ್ರಾಮದಲ್ಲಿನ ರುದ್ರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಡೆದ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಸಂಸ್ಕಾರವಿಲ್ಲದ ಶಿಕ್ಷಣ ಹಾಗೂ ಮಕ್ಕಳ ಮೇಲಿನ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಗಂಭೀರ ಸಮಸ್ಯೆಗಳಾಗಿ ಪರಿಣಮಿಸಬಹುದು. ಬಾಲ್ಯದಲ್ಲೇ ಮೌಲ್ಯಗಳನ್ನು ಬೆಳೆಸದೆ ಹೋದರೆ, ಅದೇ ಮಕ್ಕಳು ಮುಂದೆ ಸಮಾಜಕ್ಕೆ ಭಾರವಾಗುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಮಕ್ಕಳನ್ನು ಸಾಮಾಜಿಕವಾಗಿ ಉಪಕಾರಿ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ಕುಟುಂಬ ಮತ್ತು ಸಮಾಜ ಎರಡರ ಮೇಲಿದೆ ಎಂದರು.

ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಾಗ ಮಾತ್ರ ಭಾವನಾತ್ಮಕ ಬಂಧಗಳು ಗಟ್ಟಿಯಾಗುತ್ತವೆ. ಸಂಸ್ಕಾರ–ಸಂಸ್ಕೃತಿಯಿಂದ ಬೆಳೆದ ಮಕ್ಕಳೇ ಸಮಾಜದ ಅಮೂಲ್ಯ ಸಂಪತ್ತು ಎಂದ ಸ್ವಾಮೀಜಿ, ಭಾವನಾತ್ಮಕ‌ ಸಂಬಂಧಗಳು ಬಲವಾಗಿದ್ದರೆ ಕುಟುಂಬಗಳಲ್ಲಿ ಮನಸ್ತಾಪಗಳು ಕಡಿಮೆ ಇರುತ್ತವೆ. ಪರಸ್ಪರ ನಂಬಿಕೆ ಹೆಚ್ಚುತ್ತದೆ. ಆ ನಂಬಿಕೆಯೇ ಆರೋಗ್ಯಕರ ಹಾಗೂ ಸದೃಢ ಸಮಾಜದ ಬುನಾದಿಯಾಗುತ್ತದೆ. ಆದರೆ, ಈ ಬಂಧಗಳನ್ನು ದುರ್ಬಲಗೊಳಿಸುವ ಅತಿಯಾದ ಮೋಹ ಹಾಗೂ ಮಮಕಾರವೇ ಅನೇಕ ನೋವುಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ಭಾರತವು ಜಗತ್ತಿನಲ್ಲಿ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಋಷಿ-ಮುನಿಗಳ ಸಂಸ್ಕೃತಿ ಮತ್ತು ಸಂಸ್ಕಾರಗಳೇ ಬಲವಾದ ನೆಲೆಯಾಗಿರುವುದೇ ಕಾರಣ. ಆದರೆ, ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಕಂಡು ಬರುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ನಿಧಾನವಾಗಿ ಕ್ಷೀಣಿಸುತ್ತಿರುವುದು ಸಮಾಜದ ಮುಂದಿರುವ ದೊಡ್ಡ ಸವಾಲಾಗಿದೆ.‌ ಸಂಸ್ಕಾರಗಳ ಪಾಠ ಮೊದಲು ಮನೆ-ಮಠದಲ್ಲೇ ಆರಂಭವಾಗಬೇಕು. ಇಂದಿನ ಮಕ್ಕಳಲ್ಲಿ ಪ್ರೀತಿ, ಮಮಕಾರ ಹಾಗೂ ಭಾವನಾತ್ಮಕ ಸ್ಪಂದನೆ ಕಡಿಮೆಯಾಗುತ್ತಿರುವುದಲ್ಲಿ ಪಾಲಕರ ಪಾತ್ರವೂ ಇದ್ದು, ಆತ್ಮವಿಮರ್ಶೆಯಿಂದ ನೋಡಬೇಕಾಗಿದೆ. ಮಕ್ಕಳು ಮಾತಿಗಿಂತ ಆಚರಣೆಯನ್ನು ನೋಡಿ ಕಲಿಯುತ್ತಾರೆ; ಆದ್ದರಿಂದ ತಂದೆ-ತಾಯಿಯೇ ಮಕ್ಕಳಿಗೆ ಜೀವಂತ ಮಾದರಿಯಾಗಬೇಕು ಎಂದು ತಿಳಿಸಿದರು.

ಪ್ರೊ. ಪಿ.ಎಚ್. ನೀಲಗುಂದ, ಬೈಲಹೊಂಗಲದ ಈಶ್ವರ ಕರ್ಕಿ ಹಾಗೂ ಗ್ರಾಮದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಸಭೆ ಅಭಿಪ್ರಾಯ ಯೋಜನೆಯಾಗಿ ಜಾರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ
ಮಕ್ಕಳಲ್ಲಿ ಧಾರ್ಮಿಕ ಶ್ರೀಮಂತಿಕೆ ಬೆಳೆಸಲಿ: ಗವಿಸಿದ್ದೇಶ್ವರ ಶ್ರೀ