ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಕಾಂಗ್ರೆಸ್ ಅಂದ್ರೆ ದೇಶದ್ರೋಹಿಗಳಿಗೆ ಬೆಂಬಲ ಕೊಡುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಹೇಳಿದರು.ನಗರದ ಬಿಜೆಪಿ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜಿ ಅವರ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತನಾಡಲು ವಿಷಯಗಳೇ ಇಲ್ಲ. ಆದ್ದರಿಂದ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. 65 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ಗೆ ನೀತಿ, ನೇತೃತ್ವ ಹಾಗೂ ನಿಯತ್ತು ಇಲ್ಲ ಎಂದರು.
ಬೇರೆಯವರನ್ನು ಟೀಕೆ ಮಾಡುವ ಮೊದಲು ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ಹೇಳಬೇಕು. ಇಂದು ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಅಧಿಕಾರಕ್ಕೆ ಬಂದರೆ ಏನು ಅಭಿವೃದ್ಧಿ ಮಾಡಬೇಕು ಎಂಬ ಅಜೆಂಡಾ ಕೂಡ ಇವರಿಗೆ ಇಲ್ಲ. ಕಾಂಗ್ರೆಸ್‌ನವರಿಗೆ ಅಧಿಕಾರಕ್ಕೋಸ್ಕರ ದೇಶ ಹಾಳಾದರೂ ಚಿಂತೆಯಿಲ್ಲ, ತಮಗೆ ಅಧಿಕಾರ ಮಾತ್ರ ಬೇಕು ಎನ್ನುವಂತೆ ವರ್ತಿಸುತ್ತಿದ್ದಾರೆ. ಮೋದಿ ಅವರ ಆಡಳಿತದ ಕಳೆದ 10 ವರ್ಷದ ಅವಧಿಯಲ್ಲಿ ಅನೇಕ ಬದಲಾವಣೆಗಳು ಗಲ್ಲಿಯಿಂದ ದೇಶದ ಗಡಿಯವರೆಗೂ ದೇಶದ ಹಿತ ಕಾಪಾಡುವ ಕೆಲಸ ಆಗಿದೆ ಎಂದರು.ಜಗತ್ತಿನ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ನಾಯಕ ಮೋದಿ ಅವರೇ ಆಗಿದ್ದು, ನೀವು ವೈಯಕ್ತಿಕ ಟೀಕೆ ಮಾಡುವುದರಿಂದ ನಿಮ್ಮ ಬೇಳೆ ಬೇಯೋದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಲಿದೆ. ಕಾಂಗ್ರೆಸ್‌ನವರದ್ದು ಒಂದು ಕೋಮಿನವರಿಗೆ ಮಾತ್ರ ಪ್ರಾಧಾನ್ಯತೆ ನೀಡುವ ಪಕ್ಷದ ಧೋರಣೆಯಾಗಿದೆ. ಅವರು ನೀಡಿದ ಪ್ರವಾಸಭಾಗ್ಯ, ಶಾದಿಭಾಗ್ಯ ಎಂಬ ಯೋಜನೆಗಳಲ್ಲಿ ಒಂದು ಕೋಮಿಗೆ ಅನುಕೂಲ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ಕಳೆದ ಹತ್ತು ತಿಂಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಇವರಿಂದ ಆಗಿಲ್ಲ ಎಂದರು.
ಬಿಜೆಪಿ ವಕ್ತಾರ ಸಂಜಯ ಪಾಟೀಲ್ ಕನಮಡಿ ಮಾತನಾಡಿದರು. ಬೆಳಗಾವಿ ವಿಭಾಗದ ಪ್ರಮುಖ ಚಂದ್ರಶೇಖರ ಕವಟಗಿ, ಮುಖಂಡರಾದ ಈರಣ್ಣ ರಾವೂರ, ಕೃಷ್ಣಾ ಗುನ್ಹಾಳಕರ, ಸಾಬು ಮಾಶ್ಯಾಳ, ವಿಜಯ ಜೋಷಿ ಉಪಸ್ಥಿತರಿದ್ದರು.