ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹ

KannadaprabhaNewsNetwork | Published : Oct 9, 2024 1:36 AM

ಸಾರಾಂಶ

ಗದಗ ಜಿಲ್ಲೆಯ ನೂರಾರು ಸ್ಲಂ ನಿವಾಸಿಗಳೊಂದಿಗೆ ವಸತಿ ಇಲಾಖೆ ಸಚಿವರು ಹಾಗೂ ಸ್ಲಂ ಬೋರ್ಡ ಅಧ್ಯಕ್ಷರ ಗಮನಕ್ಕೆ ತಂದು ಉಗ್ರ ಹೋರಾಟ

ಗದಗ: ವಸತಿ ಯೋಜನೆ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ಶಾಖೆ ಸಮಿತಿಗಳ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ನಗರದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅವಳಿ ನಗರದ ವಿವಿಧ ಸ್ಲಂ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಮಂಜೂರಾಗಿರುವ 863 ಮನೆಗಳ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಆದರೆ ಸ್ಲಂ ಬೋರ್ಡ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುವ ಜತೆಗೆ ಯಾವುದೇ ಮನೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡದೇ ಸರ್ಕಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ ನೂರಾರು ಕೋಟಿಗಳ ಅನುದಾನದಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ ಜನರ ಅನುದಾನ ದುರ್ಬಳಕ್ಕೆ ಮಾಡಿಕೊಂಡಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸ್ಲಂ ಜನರ ಬೇಡಿಕೆಗಳಿಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ನೂರಾರು ಸ್ಲಂ ನಿವಾಸಿಗಳೊಂದಿಗೆ ವಸತಿ ಇಲಾಖೆ ಸಚಿವರು ಹಾಗೂ ಸ್ಲಂ ಬೋರ್ಡ ಅಧ್ಯಕ್ಷರ ಗಮನಕ್ಕೆ ತಂದು ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್. ಮಾನ್ವಿ, ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ದುರ್ಗಪ್ಪ ಮಣ್ಣವಡ್ಡರ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಆಯೀಷಾ ಉಮಚಗಿ, ಆರೀಫ ಕಾಗದಗಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ್‌ ಮುಲ್ಲಾನವರ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ದಾದು ಗೋಸಾವಿ, ಖಾಜೇಸಾಬ ಬಳ್ಳಾರಿ, ಮಲೇಶಪ್ಪ ಕಲಾಲ, ಚಂದ್ರಪ್ಪ ಲಕ್ಕುಂಡಿ, ನಜೀರಅಹ್ಮದ ಹಾವಗಾರ, ಶರಣಪ್ಪ ಬಿಂಗದಕಟ್ಟಿ ಹಾಗೂ ನೂರಾರು ಸ್ಲಂ ನಿವಾಸಿಗಳು ಇದ್ದರು.

Share this article