ಜೆಜೆಎಂ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಗುತ್ತಿಗೆದಾರನ ವಿರುದ್ಧ ಎಫ್ಐರ್ ದಾಖಲಿಸಿ

KannadaprabhaNewsNetwork |  
Published : Jul 08, 2024, 12:34 AM IST
6 ಝಇೆVಅಅ ಝಇ4 | Kannada Prabha

ಸಾರಾಂಶ

ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರನ ಮೇಲೆ ಎಫ್ಐಆರ್ ದಾಖಲಿಸಬೇಕು.

ಗಂಗಾವತಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಶಾಸಕರ ಸೂಚನೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹110 ಕೋಟಿ ಯೋಜನೆಯ ಕುಡಿಯುವ ನೀರು ಕಾಮಗಾರಿಯನ್ನು ಶಾಸಕ, ಸಚಿವರ ಗಮನಕ್ಕೆ ತರದೇ ಪ್ರಾರಂಭಿಸಲಾಗಿದೆ. ಈಗಾಗಲೇ ₹25 ಕೋಟಿ ಕಾಮಗಾರಿ ಪೂರ್ಣಗೊಳಿಸಿದ್ದು, ಭ್ರಷ್ಟಾಚಾರ ನಡೆದಿದೆ. ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರನ ಮೇಲೆ ಎಫ್ಐಆರ್ ದಾಖಲಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಜಿಪಂ ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇಗೆ ಸೂಚಿಸಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಜೆಎಂ ಯೋಜನೆ ಕಾಮಗಾರಿಯಲ್ಲಿ ಕಾಲಹರಣ ಮಾಡಿರುವ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿ ಎಂದು ತಿಳಿಸಿದರು.

ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ₹110 ಕೋಟಿ ಯೋಜನೆಯ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಸರ್ಕಾರ ಅನುದಾನ ನೀಡಿದೆ. ಈ ಯೋಜನೆ ಕಾಮಗಾರಿ ಕೈಗೊಳ್ಳುವ ಮುಂಚೆ ಸಚಿವರು, ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಭೂಮಿಪೂಜೆ ಕೈಗೊಳ್ಳಬೇಕು. ಆದರೆ ಇದು ಯಾವುದನ್ನು ಮಾಡದೆ ಟೆಂಡರ್ ಪಡೆದುಕೊಂಡ ಗುತ್ತಿಗೆದಾರ ಕೆಲಸ ಪ್ರಾರಂಭಿಸಿ ₹25 ಕೋಟಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ ಕೂಡ ಕಳೆದ ವಾರದ ನಡೆದ ಜಿಲ್ಲಾ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಏಕಾಏಕಿ ಕೋಟಿಗಟ್ಟಲೆ ಕಾಮಗಾರಿ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ತಕ್ಷಣ ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರಲ್ಲದೇ, ಕಳೆದ ನಾಲ್ಕು ವರ್ಷದಿಂದ ನಡೆಸುತ್ತಿರುವ ಜೆಜೆಎಂ ಯೋಜನೆ ಕಾಮಗಾರಿ ವಿಳಂಬವಾಗಿದ್ದು, ಗುತ್ತೇದಾರರನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ತಕ್ಷಣ ಎಫ್‍ಐಆರ್ ದಾಖಲಿಸುವಂತೆ ಜಿಪಂ ಸಿಇಓಗೆ ಕರೆ ಮಾಡಿ ಸೂಚನೆ ನೀಡಿದರು.

ನಂತರ ಆರೋಗ್ಯ ಇಲಾಖೆಯ ಪ್ರಗತಿ ವರದಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಗೌರಿಶಂಕರ, ಕಳೆದ ಜನವರಿಯಿಂದ ಇಲ್ಲಿಯವರೆಗೆ 13 ಡೆಂಘೀ ಪ್ರಕರಣಗಳು ದಾಖಲಾಗಿವೆ. ಚಿಕಿತ್ಸೆ ಮತ್ತು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಕೊರತೆ ಇದ್ದು, ನಗರದಲ್ಲಿ ನಿರ್ಮಾಣವಾಗುತ್ತಿರುವ ₹3 ಕೋಟಿ ಅನುದಾನದ ಹಾಸ್ಟೆಲ್ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಹಿಂದುಳಿದ ಇಲಾಖೆ ವಿಸ್ತರಣಾಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಕೆಆರ್‌ಡಿಎಲ್ ಎಇಇ ಮತ್ತು ಜೆಇ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಆ.15ರೊಳಗೆ ಪೂರ್ಣಗೊಳಿಸಿ ಹಾಸ್ಟೆಲ್ ಪ್ರಾರಂಭಕ್ಕೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.

ಅಬಕಾರಿ ಇಲಾಖೆ ಆರಕ್ಷಕ ನಿರೀಕ್ಷಕ ಪಿರಗಣ್ಣನವರ್ ಮಾತನಾಡಿ, ಒಂದು ವರ್ಷದಲ್ಲಿ 282 ದಾಳಿ ಮಾಡಿದ್ದು, 1351 ವಾಹನ ತಪಾಸಣೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಒಂದು ವರ್ಷದಲ್ಲಿ ₹7.43 ಕೋಟಿ ಆದಾಯವನ್ನು ಸರ್ಕಾರಕ್ಕೆ ನೀಡಿದ್ದೇವೆ ಎಂದರು.

ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಂಗಾವತಿ ಮತ್ತು ಕೊಪ್ಪಳ ತಾಲೂಕಿನ ಕೃಷಿ, ಶಿಕ್ಷಣ, ಜೆಸ್ಕಾಂ, ಲೋಕೋಪಯೋಗಿ, ಅರಣ್ಯ, ಸಾಮಾಜಿಕ ವಲಯ ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು.

ಸಭೆಯಲ್ಲಿ ಗಂಗಾವತಿ ತಹಸೀಲ್ದಾರ ನಾಗರಾಜ, ತಾಪಂ ಇಒ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಕೊಪ್ಪಳ ತಾಪಂ ಇಒ ದುಂಡಪ್ಪ ಮತ್ತು ಕೊಪ್ಪಳ ತಹಸೀಲ್ದಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ