ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ಟಿ.ಮರಿಯಪ್ಪ ವೃತ್ತದಲ್ಲಿ ರಸ್ತೆ ತಡೆನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ನಂತರ ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಕೆಲಹೊತ್ತು ಧರಣಿ ನಡೆಸಿದರು.
ಈ ವೇಳೆ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರ ಯಾವುದೇ ಕೆಲಸ ಕಾರ್ಯಗಳು ಆಗಬೇಕೆಂದರೆ ಅಧಿಕಾರಿಗಳಿಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಮತ್ತು ಗೋಮಾಳ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ತಾಲೂಕು ಕಚೇರಿ ಆರ್‌ಆರ್‌ಟಿ ವಿಭಾಗದಲ್ಲಿ ರೈತರ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇರುವುದನ್ನು ಪತ್ತೆಹಚ್ಚಿರುವ ಉಪಲೋಕಾಯುಕ್ತರು ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಲೋಕಾಯುಕ್ತರು ಮತ್ತು ಇ.ಡಿ.ಅಧಿಕಾರಿಗಳ ದಾಳಿ ನಂತರವೂ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದರಿಂದ ಆಡಳಿತ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ರೈತ ಮುಖಂಡ ಲೋಕೇಶ್ ಮಾತನಾಡಿ, ರೈತರು ತಮ್ಮ ಭೂದಾಖಲೆ ಕೇಳಿ ಅರ್ಜಿ ಸಲ್ಲಿಸಿದರೆ ಸತಾಯಿಸುವ ಕಂದಾಯ ಅಧಿಕಾರಿಗಳು ಅದೇ ರೈತರ ಮೂಲ ಭೂದಾಖಲೆಗಳನ್ನು ಕಸದ ತೊಟ್ಟಿಗೆ ಬಿಸಾಡಿ ಭೂಗಳ್ಳರಿಗೆ ಅನುಕೂಲ ಮಾಡಿಕೊಡುತ್ತಾರೆ. ಇಷ್ಟೊಂದು ಭಷ್ಟಾಚಾರ ಅವ್ಯವಹಾರ ನಡೆಯುತ್ತಿದ್ದರೂ ಕೂಡ ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ಕ್ಷೇತ್ರದ ಶಾಸಕರೇ ಜಲಸಂಪನ್ಮೂಲ ಸಚಿವರಾಗಿದ್ದರೂ ಕೂಡ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮಾವತಿ ನೀರು ತುಂಬಿಸಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದ್ದರೂ ಈವರೆಗೆ ರೈತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಬರಪೀಡಿತ ರೈತರಿಗೆ ಬೆಳೆ ವಿಮೆಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೈಸೂರಿನ ನಾರಾಯಣ, ಮಂಜೇಗೌಡ, ಪ್ರಭುಲಿಂಗೇಗೌಡ, ಚಂದ್ರು, ಪುಟ್ಟಸ್ವಾಮಿ, ರಾಮಲಿಂಗೇಗೌಡ, ಸೊ.ಸಿ.ಪ್ರಕಾಶ್, ರವಿಕುಮಾರ್ ಸೇರಿದಂತೆ ಹಲವರು ಇದ್ದರು.