ಶಾಲಾ ಮಕ್ಕಳಿಗೆ ಶೂ ವಿತರಣೆಯಲ್ಲೂ ಭ್ರಷ್ಟಾಚಾರ

KannadaprabhaNewsNetwork |  
Published : Sep 30, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಮಾಡುವಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಸರ್ಕಾರ ನೀಡಿರುವ ಶೂಗಳನ್ನು ಮಕ್ಕಳು ಒಂದು ದಿನವೂ ಬಳಸಲಾಗದ ಪರಿಸ್ಥಿತಿ ಇದೆ. ಮಕ್ಕಳಿಗೆ ನೀಡುವ ಶೂಗಳಲ್ಲಿಯೂ ಹಣ ಪಡೆಯುತ್ತಾರೆ ಎಂದಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಕ್ರೋಶ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಮಾಡುವಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಸರ್ಕಾರ ನೀಡಿರುವ ಶೂಗಳನ್ನು ಮಕ್ಕಳು ಒಂದು ದಿನವೂ ಬಳಸಲಾಗದ ಪರಿಸ್ಥಿತಿ ಇದೆ. ಮಕ್ಕಳಿಗೆ ನೀಡುವ ಶೂಗಳಲ್ಲಿಯೂ ಹಣ ಪಡೆಯುತ್ತಾರೆ ಎಂದಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ತಾಪಂ, ನಗರಸಭೆ, ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಮುಕ್ತಿಹಳ್ಳಿ ಟೈಮ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 14 ವರ್ಷ ವಯೋಮಾನದೊಳಗಿನ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಇದುವರೆಗೂ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಿಸಲು ಸಾಧ್ಯವಾಗಿಲ್ಲ. ದುಬಾರಿ ಬೆಲೆಗೆ ಪಠ್ಯಪುಸ್ತಕಗಳನ್ನು ಖರೀದಿಸಿ ವಿತರಿಸಲಾಗುತ್ತಿದ್ದು, ಇದೇ ಪುಸ್ತಕಗಳು ಹೊರಗಡೆಯ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿವೆ. ಇಂತಹ ವ್ಯವಸ್ಥೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ರಾಜ್ಯದ ಸುಮಾರು 1,500 ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಮೊದಲು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದ ಮೂಲಸೌಕರ್ಯ ಸುಧಾರಿಸಬೇಕು ಎಂದರು. ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಸರ್ಕಾರ ನೀಡುವ ಅನುದಾನ ಸಾಲುತ್ತಿಲ್ಲ. ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರವಿಲ್ಲದೆ ಕ್ರೀಡಾಕೂಟ ನಡೆಸುವುದು ಕಷ್ಟವಾಗಿದ್ದು, ಸರ್ಕಾರ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕ್ರೀಡಾಂಗಣದಲ್ಲಿ ಬೀದಿ ದೀಪ ಅಳವಡಿಕೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ ಶೂ ವಿತರಣೆಯಲ್ಲಿನ ಲೋಪದ ಕುರಿತು ಸಂಬಂಧಿಸಿದ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಆರೋಗ್ಯಕರ ಜೀವನಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಡಿಡಿಪಿಐ ತಿಮ್ಮರಾಜು, ಬಿಇಒ ರುದ್ರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ರವಿ ನಾಯಕ, ದೈಹಿಕ ಶಿಕ್ಷಣ ವಿಷಯ ಪರೀಕ್ಷಕ ಮಹೇಶ್ ನೀಲಕಂಠಪ್ಪ, ಮಂಜುನಾಥ್ ಮತ್ತಿತರರು ಇದ್ದರು. ಮುಖ್ಯ ಶಿಕ್ಷಕಿ ನಯನ ಮಂಜುನಾಥ್ ಸ್ವಾಗತಿಸಿ, ಮಧುರ ವಂದಿಸಿದರು.

ಫೋಟೊ :

ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಮುಕ್ತಿಹಳ್ಳಿ ಟೈಮ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 14 ವರ್ಷ ವಯೋಮಾನದೊಳಗಿನ ಮಕ್ಕಳ ಕ್ರೀಡಾಕೂಟವನ್ನು ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ