
ಐಸಿರಿ ಫೌಂಡೇಷನ್ ಅಧ್ಯಕ್ಷ ರೋಹನ್ ಭಾರ್ಗವಪುರಿ
ಸಾಮಾಜಿಕ ಜಾಲತಾಣಗಳು ಇಂದಿನ ಜೀವನದ ಅವಿಭಾಜ್ಯ ಭಾಗ. ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ಜವಾಬ್ದಾರಿಯುತವಾಗಿ ಬಳಸುವ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಐಸಿರಿ ಫೌಂಡೇಷನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಹೇಳಿದರು.ನಗರದ ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಐಸಿರಿ ಫೌಂಡೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಆರೋಗ್ಯ ಅರಿವು ಕಾರ್ಯ ಕ್ರಮದಲ್ಲಿ ಸಾಮಾಜಿಕ ಜಾಲತಾಣ ವ್ಯಸನದ ಪರಿಣಾಮಗಳ ಕುರಿತು ಮಾತನಾಡಿದರು. ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸದೆ ಜ್ಞಾನ, ಸೃಜನಶೀಲತೆ ಹಾಗೂ ವೈಯಕ್ತಿಕ ಕೌಶಲ್ಯ ವೃದ್ಧಿಗೆ ಬಳಸಬೇಕು. ನಿರಂತರ ಸ್ಕ್ರೋಲಿಂಗ್, ನಕಾರಾತ್ಮಕ ವಿಷಯಗಳ ವೀಕ್ಷಣೆ ಹಾಗೂ ಇತರರ ಮಾನ್ಯತೆಗೆ ಕಾಯುವ ಮನೋಭಾವ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಹೀಗಾಗಿ ಸ್ಕ್ರೀನ್ ಟೈಮ್‌ಗಿಂತ ಆತ್ಮಜಾಗೃತಿಗೆ ಆದ್ಯತೆ ನೀಡಬೇಕು ಎಂದರು.ಸಾಮಾಜಿಕ ಜಾಲತಾಣ ಶಿಕ್ಷಣ, ಉದ್ಯೋಗ, ಮಾಹಿತಿ, ಸಂಪರ್ಕ ಹಾಗೂ ಸೃಜನಶೀಲತೆಗೆ ಉತ್ತಮ ಸಾಧನವಾಗಬಲ್ಲದು. ವಿದ್ಯಾರ್ಥಿಗಳು ಕೇವಲ ವಿಷಯಗಳ ಗ್ರಾಹಕರಾಗದೆ, ತಮ್ಮ ಪ್ರತಿಭೆ ಬಳಸಿಕೊಂಡು ಸೃಜನಶೀಲ ವಿಷಯಗಳ ನಿರ್ಮಾತೃ ಗಳಾಗಬೇಕು. ಊಟದ ಸಮಯದಲ್ಲಿ ಮೊಬೈಲ್ ದೂರವಿಟ್ಟು ಕುಟುಂಬದವರೊಂದಿಗೆ ಸಂವಹನ ನಡೆಸುವಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆರ್‌ಸಿಎಚ್‌ಒ ಡಾ. ಹರೀಶ್ ಬಾಬು ಮಾತನಾಡಿ, ಹದಿಹರೆಯದ ಗರ್ಭಧಾರಣೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಕಳೆದ ವರ್ಷ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 66 ಗರ್ಭಧಾರಣೆ ಪ್ರಕರಣಗಳು ವರದಿಯಾಗಿದ್ದರೆ, ಪ್ರಸಕ್ತ ವರ್ಷ ಏಪ್ರಿಲ್‌ನಿಂದ ಈವರೆಗೆ 21 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಎಚ್‌ಪಿವಿ ಲಸಿಕೆ ಪ್ರಮುಖವಾಗಿದ್ದು, ಅರ್ಹ ವಯೋಮಾನದ ಬಾಲಕಿ ಯರು ಹಾಗೂ ಅವರ ಪೋಷಕರು ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದು ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.ನಾಯಿ ಕಚ್ಚಿದ ಸಂದರ್ಭದಲ್ಲಿ ಗಾಯವನ್ನು ತಕ್ಷಣ ಹರಿವ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಅರಿಶಿನ, ಕಾಫಿ ಪುಡಿ ಸೇರಿದಂತೆ ಯಾವುದೇ ಮನೆಮದ್ದು ಅಥವಾ ಪುಡಿಯನ್ನು ಗಾಯಕ್ಕೆ ಹಾಕದೆ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷೆ ಆಶಾ ಮಲ್ಲೇಶ್ ಮಾತನಾಡಿದರು. ಲಲಿತಾ ಅವರು ವೈಯಕ್ತಿಕ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಶ್ರೀ ತರಳಬಾಳು ಸಂಸ್ಥೆ ಚಿಕ್ಕಮಗಳೂರು ವಲಯದ ರಿಜಿಸ್ಟ್ರಾರ್ ಪ್ರಕಾಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.