ಕನ್ನಡಪ್ರಭ ವಾರ್ತೆ ಹುಣಸೂರು
ಗುರುಬೂದಿ ಮಂಗಳ ಮಂಟಪದಲ್ಲಿ ಜ್ಞಾನಧಾರಾ ಎಜುಕೇಶನಲ್ ಫೌಂಡೇಶನ್ ವತಿಯಿಂದ ನಡೆದ ಸಮಾರಂಭದಲ್ಲಿ ಎಚ್.ಪಿ. ಮಂಜುನಾಥ್ ಮಾತನಾಡಿ, ಅಕ್ಕಪಕ್ಕದ ಎರಡು ಜಿಲ್ಲೆಗಳ ಯುವ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಜ್ಞಾನಧಾರಾ ಶಿಕ್ಷಣ ಸಂಸ್ಥೆಯು ಕಾನೂನು ಕಾಲೇಜು ಆರಂಭಿಸಿರುವ ಡಾ. ನಾಗೇಂದ್ರ-ಯಮುನ ದಂಪತಿ ಸಾರ್ಥಕ ಕೆಲಸ ಮಾಡಿದ್ದಾರೆ. ವಿದ್ಯೆ ಜೊತೆಗೆ ಉದ್ಯೋಗ ಕಲ್ಪಿಸುವ ಜಾಬ್ ಓರಿಯಂಟೆಡ್ ಕೋರ್ಸ್ ಆರಂಭಿಸಲೆಂದು ಆಶಿಸಿ, ತಾಲೂಕಿನಲ್ಲಿ ಯಾರೇ ಶಿಕ್ಷಣ ಸಂಸ್ಥೆ ತೆರೆದರು ಅದರ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲುವೆನೆಂದು ತಿಳಿಸಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಇಂದು ವಿದ್ಯೆಯೇ ಪ್ರಧಾನವೆಂಬುದನ್ನು ಅರಿತ ನಾಗೇಂದ್ರ-ಯಮುನಾ ದಂಪತಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾನೂನು ಶಿಕ್ಷಣ ಪಡೆಯಲು ಒಳ್ಳೆ ಉದ್ದೇಶವಿಟ್ಟುಕೊಂಡು ಲಾ ಕಾಲೇಜು ತೆರೆದಿದ್ದಾರೆ. ಅಲ್ಲದೆ ಕಳೆದ 14 ವರ್ಷಗಳಿಂದ ಪದವಿ ಕಾಲೇಜು ಆರಂಭಿಸಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇಂತಹ ಸಂಸ್ಥೆಗೆ ಸರ್ಕಾರದಿಂದ ಎರಡು ಎಕರೆ ಭೂಮಿ ಕೊಡಿಸುವಂತೆ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಮನವಿ ಮಾಡಿ, ಕರ್ತವ್ಯದಲ್ಲಿ ನಿಷ್ಟೆ, ದೇವರಲ್ಲಿ ಭಕ್ತಿ, ಹಿರಿಯರಲ್ಲಿ ಪ್ರೀತಿ ಇದ್ದಲ್ಲಿ ಮಾತ್ರ ಅದು ಧರ್ಮದ ಕಾನೂನು, ಇದನ್ನು ಮರೆತರೆ ಸಮಾಜಕ್ಕೆ, ಸಂಸ್ಕಾರಕ್ಕೆ ಕಂಟಕ ಎದುರಾಗಲಿದೆ ಎಂದರು.ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮಿಜಿ, ಗಾವಡಗೆರೆಯ ನಟರಾಜ ಸ್ವಾಮೀಜಿ, ಸಂಸ್ಥೆಯ ಎಂಡಿ ಜೆ.ಸಿ. ನಾಗೇಂದ್ರ, ಕಾಡಸಿದ್ದೇಶ್ವರ ಮಠದ ಆಡಳಿತಾಧಿಕಾರಿ ನಟೇಶ್, ಸಂಸ್ಥೆಯ ಅಧ್ಯಕ್ಷೆ ಯಮುನ, ಕಿಡ್ವೆಂಟೋ ಸಂಸ್ಥೆಯ ನಿರ್ದೇಶಕ ವಾಗೀಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಶಿವಪ್ರಕಾಶ್, ದೆಹಲಿಯ ನ್ಯಾಷನಲ್ ಚೀಫ್ ಅಡ್ವೆಂಚರ್ ರಾಮಪ್ರಕಾಶ್ ಶರ್ಮ, ಸಮಾಜ ಸೇವಕ ಪ್ರದೀಪ್ ಕುಮಾರ್, ಆಡಿಟರ್ ರಘು, ರಮೇಶ್ ಬಾಬು ಮಾತನಾಡಿದರು.